Gruhalakshmi Scheme: ಚಿತ್ರದುರ್ಗ ಜಿಲ್ಲೆಯಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ವರದಾನವಾದ ಗೃಹಲಕ್ಷ್ಮಿ ಹಣ
Gruhalakshmi Scheme: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಮಹತ್ವದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಮನೆ ಯಜಮಾನಿಗೆ 2,000 ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಇನ್ನು ಈ ಹಣದಿಂದ ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬವನ್ನು ನಿಭಾಯಿಸುತ್ತಿರುವ ಉದಾಹರಣೆಗಳಿವೆ.
ಈಗಾಗಲೇ ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ತಮ್ಮ ಮನೆ ಮಂದಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿ ಮಾಡಿರುವ ಘಟನೆಗಳು ನಡೆದಿವೆ. ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದ ಜನತೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಆಸರೆಯಾಗಿವೆ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಚಿತ್ರದುರ್ಗ ಜಿಲ್ಲೆಯ ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮೀ ಯೋಜನೆ ವರದಾನವಾಗಿದೆ.

ಮಕ್ಕಳ ಶಾಲೆ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ 2,000 ರೂಪಾಯಿ ಸದ್ಬಳಕೆಯಾಗುತ್ತಿದೆ. ಜೊತೆಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಹೈನುಗಾರಿಕೆ, ಮನೆಗೆ ಪ್ರಿಡ್ಜ್ ಖರೀದಿಸಿ ಗೃಹಲಕ್ಷ್ಮೀ ಯೋಜನೆಯ ಸದುಯೋಗ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ 2023ರ ಆಗಸ್ಟ್ 30ರಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಇದೀಗ ಈ ಯೋಜನೆಯ ಸದ್ವಿನಿಯೋಗದ ಪರಿಣಾಮಗಳು ಜಿಲ್ಲೆಯಲ್ಲಿ ಗೋಚರಿಸಲಾರಂಭಿಸಿದ್ದು, ಮಹಿಳೆಯರ ಪಾಲಿಗೆ ಈ ಯೋಜನೆ ನಿಜಕ್ಕೂ ವರದಾನವಾಗಿದೆ.
ಕೋಟಿ 963 ರೂಪಾಯಿ ಜಮೆ: ಚಿತ್ರದುರ್ಗ ಜಿಲ್ಲೆಯಲ್ಲಿ 4,05,282 ಪಡಿತರ ಚೀಟಿಗಳು ಇದ್ದು, ಇದರಲ್ಲಿ 3,91,639 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿರುತ್ತಾರೆ. ಜಿಲ್ಲೆಯ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಸೆಪ್ಟಂಬರ್ ಅಂತ್ಯದವರೆಗೂ 963.58 ಕೋಟಿ ರೂಪಾಯಿ ಜಮೆ ಮಾಡಲಾಗಿದೆ. ಇ-ಕೆವೈಸಿ ಹಾಗೂ ಎಸ್.ಪಿ.ಸಿ.ಐ ಮ್ಯಾಪಿಂಗ್, ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಿ, ಅರ್ಹ ಮಹಿಳೆಯರಿಗೆ ಸಹ ಗೃಹಲಕ್ಷ್ಮೀ ಹಣ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದೆ.
ಹೊಲಿಗೆ ಯಂತ್ರ ಖರೀದಿ: ಜಿಲ್ಲೆಯ ಕಲ್ಕೆರೆ ಗ್ರಾಮದ ದ್ರಾಕ್ಷಾಯಿಣಿ ಪ್ರತಿ ತಿಂಗಳು ಬರುತ್ತಿದ್ದ ಗೃಹಲಕ್ಷಿ ಯೋಜನೆಯ 2,000 ರೂಪಾಯಿಗಳನ್ನು ಕೂಡಿಸಿಟ್ಟುಕೊಂಡು, ಸ್ವಂತಕ್ಕೆ ಹೊಲಿಗೆ ಯಂತ್ರ ಖರೀದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, ಮನೆಯ ಬದುಕಿಗೆ ದಾರಿದೀಪವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಅದೇ ರೀತಿ ಬೇಡರ ಶಿವನಕೆರೆ ಗ್ರಾಮ ಸುನಿತಾ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಿದ್ದಾರೆ. 14 ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2,000 ರೂಪಾಯಿ ಹಣ ಅವರ ಖಾತೆಗೆ ಜಮೆಯಾಗುತ್ತಿದೆ. ಮಕ್ಕಳ ಶಾಲೆ ಶುಲ್ಕ ಜೊತೆಗೆ ಟೈಲರ್ ವೃತ್ತಿಯನ್ನು ಆರಂಭಿಸಿ ದುಡಿಮೆಯ ಮಾರ್ಗ ಕಂಡಕೊಳ್ಳಲು ಯೋಚಿಸಿದ ಸುನಿತಾ ಗೃಹಲಕ್ಷ್ಮೀ ಹಣದಲ್ಲಿ ಹೊಸ ಹೊಲಿಗೆ ಯಂತ್ರ ಖರೀದಿ ಮಾಡಿದ್ದಾರೆ.
ಬಟ್ಟೆ ವ್ಯಾಪಾರಕ್ಕೆ ನೆರವಾದ ಗೃಹಲಕ್ಷ್ಮೀ: ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಅಶ್ವಿನಿ ಗೃಹಲಕ್ಷ್ಮೀ ಹಣದಿಂದ ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ. ವ್ಯಾಪಾರವು ಸಹ ಚೆನ್ನಾಗಿ ನಡೆಯುತ್ತಿದ್ದು, ಸ್ವಾವಲಂಬಿ ಬದುಕಿನಡೆಗೆ ಹೆಜ್ಜೆ ಇರಿಸಿದ್ದಾರೆ.
ಹೈನುಗಾರಿಕೆಗೆ ಇಂಬು: ಸರ್ಕಾರ ಹೈನುಗಾರಿಕೆ ಆರಂಭಿಸಲು ಬ್ಯಾಂಕುಗಳ ಮೂಲಕ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಅದರೆ, ಕೆಲವೊಮ್ಮೆ ಅಗತ್ಯ ದಾಖಲೆಗಳ ಕೊರತೆಯಿಂದ ಈ ಸಾಲ ಸೌಲಭ್ಯ ಪಡೆಯುವಲ್ಲಿ ಸಾಕಷ್ಟು ಜನರು ವಂಚಿತರಾಗುತ್ತಾರೆ. ಅದರೆ ಚಿತ್ರದುರ್ಗ ತಾಲ್ಲೂಕಿನ ಮೆದಹಳ್ಳಿ ಗ್ರಾಮದ ವಸಂತ ಅವರಿಗೆ ಗೃಹಲಕ್ಷ್ಮೀ ಯೋಜನೆ ಹಣ ಹೈನುಗಾರಿಕೆ ಆರಂಭಿಸಲು ಇಂಬು ನೀಡಿದೆ. ಯೋಜನೆ ಹಣ ಕೂಡಿಟ್ಟು ಹಸು ಖರೀದಿಸಿರುವ ವಸಂತ ಹೈನುಗಾರಿಕೆ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಫ್ರಿಡ್ಜ್ ಖರೀದಿಸಿದ ಮಹಿಳೆ: ಗೃಹಲಕ್ಷ್ಮೀ ಯೋಜನೆ ಚಳ್ಳಕೆರೆಯ ಶಾಂತಿನಗರ ನಿವಾಸಿ ಶಾಂತಿಯವರ ಸಂತಸ ಇಮ್ಮಡಿಗೊಳಿಸಿದೆ. ಬಹುದಿನಗಳಿಂದ ಮನೆಗೊಂದು ಫ್ರಿಡ್ಜ್ ಖರೀದಿಸಲು ತವಕ ಪಡುತ್ತಿದ್ದ ಶಾಂತಿಯವರು ಗೃಹಲಕ್ಷ್ಮೀ ಹಣದಲ್ಲಿ ಮನಗೆ ಹೊಸ ಫ್ರಿಡ್ಜ್ ಖರೀದಿಸಿದ್ದಾರೆ.












Click it and Unblock the Notifications