ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ, ಇಬ್ಬರು ಸ್ಥಳದಲ್ಲೇ ಸಾವು
ಚಿತ್ರದುರ್ಗ, ಫೆಬ್ರವರಿ, 06: ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಭರಮಸಾಗರ ವ್ಯಾಪ್ತಿಯ ಕೆ.ಬಳ್ಳೆಕಟ್ಟೆ ಬಳಿ ಘಟನೆ ನಡೆದಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ಕಾರು ಎನ್ನಲಾಗಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಚಿತ್ರದುರ್ಗದ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು
ಇತ್ತೀಚೆಗಷ್ಟೇ ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಅಸುನೀಗಿದ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿತ್ತು.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪದ ಈ ಅವಘಡ ಸಂಭವಿಸಿತ್ತು. ಮೃತರನ್ನು ಚಳ್ಳಕೆರೆಯ ವೆಂಕಟೇಶ(57), ಚಿತ್ರಯ್ಯನಟ್ಟಿ ವೆಂಕಟೇಶ್ (55) ಎಂದು ಗುರುತಿಸಲಾಗಿದೆ. ಇನ್ನು ಕಿಶೋರ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಅಪಘಾತದ ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಟಿವಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿತ್ತು.












Click it and Unblock the Notifications