Breaking: ಚಿತ್ರದುರ್ಗದಲ್ಲಿ ಕಾರು ಅಪಘಾತ; 5 ವರ್ಷದ ಮಗು ಸೇರಿ ಮೂವರು ಸಾವು
ಚಿತ್ರದುರ್ಗ, ಫೆಬ್ರವರಿ 7: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 5 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ತಡರಾತ್ರಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಗೀತಾ(32), ಶಾರದಾ (60) ಹಾಗೂ ಧೃತಿ (5) ಎಂದು ಗುರುತಿಸಲಾಗಿದ್ದು, ಇವರು ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜೋಡಿ ಶ್ರೀರಂಗಾಪುರ ಬಳಿ ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾಗಿದ ಪರಿಣಾಮ ಕಾರಿನಲ್ಲಿದ್ದ 5 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಾಗಿದೆ.
ಅನಂತಪುರಂನಲ್ಲಿ ಭೀಕರ ಅಪಘಾತ; 9 ಜನರ ದುರ್ಮರಣ
ಎಸ್ಯುವಿ ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿ 9 ಮಂದಿ ಮೃತಪಟ್ಟ ದುರ್ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಬುಡಗಾವಿ ಗ್ರಾಮದ ಬಳಿ ನಡೆದಿದೆ.
ಭಾನುವಾರ ರಾತ್ರಿ ಈ ಭೀಕರ ಅಪಘಾತವಾಗಿದ್ದು, ಮೃತರೆಲ್ಲರೂ ಒಬ್ಬರಿಗೊಬ್ಬರು ಸಂಬಂಧಿಕರೇ ಆಗಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಮದುವೆಗೆ ಬಂದಿದ್ದ ಇವರು, ತಮ್ಮ ಉರವಕೊಂಡ ಗ್ರಾಮಕ್ಕೆ ವಾಪಸ್ ಬರುತ್ತಿದ್ದರು ಎಂದು ಆಂಧ್ರಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.
ಲಾರಿ ಚಾಲಕ ಅತ್ಯಂತ ವೇಗವಾಗಿ ವಾಹನ ಓಡಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಬುಡಗಾವಿ ಬಳಿ ಎಸ್ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿಯಾದ ಪರಿಣಾಮ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಬ್ಬಾತನಿಗೆ ಗಂಭೀರ ಗಾಯಗೊಂಡು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಆತನೂ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟವರಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಕೂಡ ಇದ್ದಾರೆ.
ಮೃತಪಟ್ಟವರಲ್ಲಿ ಆರು ಮಹಿಳೆಯರು, ಇಬ್ಬರು ಪುರುಷರು ಮತ್ತು ಒಬ್ಬ ಹುಡುಗ ಸೇರಿದ್ದಾನೆ. ಎಸ್ಯುವಿ ವಾಹನ ನುಜ್ಜುಗುಜ್ಜಾಗಿದ್ದ ಕಾರಣ ಮೃತದೇಹಗಳನ್ನು ಅದರಿಂದ ಹೊರತೆಗೆಯುವುದು ಕಷ್ಟವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications