Chitradurga Nomination:ಚಿತ್ರದುರ್ಗ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ
ಚಿತ್ರದುರ್ಗ, ಏಪ್ರಿಲ್ 20: ವಿಧಾನಸಭಾ ಚುನಾವಣೆಗೆ ದಿನ ಕಳೆದಂತೆ ಚಟುವಟಿಕೆಗಳು ರಂಗಿರುತ್ತಿದ್ದು, ಚಿತ್ರದುರ್ಗ ಜಿಲ್ಲೆಯಾದ್ಯಂತ ವಿವಿಧ ಪಕ್ಷದ ಅಭ್ಯರ್ಥಿಗಳು ರಣ ಬಿಸಿಲು ಲೆಕ್ಕಿಸದೇ ಅದ್ಧೂರಿಯಾಗಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂ ಚಂದ್ರಪ್ಪ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಿಹೆಚ್. ತಿಪ್ಪಾರೆಡ್ಡಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್ ಲಿಂಗಮೂರ್ತಿ, ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಮಾಜಿ ಸಚಿವ ಡಿ ಸುಧಾಕರ್ ನಾಮಪತ್ರ ಸಲ್ಲಿಸಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಟಿ ರಘುಮೂರ್ತಿ, ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸ್ಥಳೀಯ ಅಭ್ಯರ್ಥಿ ಗನ್ನಾಯಕನಹಳ್ಳಿ ಹೆಚ್ ಮಹೇಶ್, ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಗೂಳಿಹಟ್ಟಿ ಡಿ ಶೇಖರ್ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ನಂತರ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಬೆಳಿಗ್ಗೆಯಿಂದಲೇ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡ ಅಭ್ಯರ್ಥಿಗಳು ದೇವಸ್ಥಾನ, ಚರ್ಚ್, ಮಸೀದಿ, ದರ್ಗಾ, ಚರ್ಚ್‌ಗೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

ಚಿತ್ರದುರ್ಗದಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಡಿ ಶೇಖರ್ ಅವರು ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ತನ್ನ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡು ಬಿಜೆಪಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಗೂಳಿಹಟ್ಟಿ ನಂತರ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದು ಉಮೇದುವಾರಿಕೆ ಸಲ್ಲಿಸಿದರು.
ತಿಪ್ಪೇಸ್ವಾಮಿಗೆ ರಾಮುಲು ಸಾಥ್
ಮೊಳಕಾಲ್ಮೂರು ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್ ತಿಪ್ಪೇಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪಟ್ಟಣದಲ್ಲಿ ಅಪಾರ ಬೆಂಬಲಿಗರೊಂದಿಗೆ ತೆರದ ವಾಹನದಲ್ಲಿ ರೋಡ್ ಶೋ ನಡೆಸಿದ ತಿಪ್ಪೇಸ್ವಾಮಿಗೆ ಸಚಿವ ಶ್ರೀರಾಮುಲು ಸಾಥ್ ನೀಡಿದರು. ಇನ್ನು ಅಭ್ಯರ್ಥಿ ತಿಪ್ಪೇಸ್ವಾಮಿ ಮ್ಯಾಸಬೇಡರ ವೇಷದಾರಿಯಾಗಿ ಕಂಡಿದ್ದು, ವಿಶೇಷವಾಗಿತ್ತು. ಇನ್ನು ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ಅವರಿಗೆ ಪತ್ನಿ ಹರ್ಷಿಣಿ ಸುಧಾಕರ್ ಸಾಥ್ ನೀಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಅವರು ಅಪಾರ ಬೆಂಬಲಿಗರೊಂದಿಗೆ ಚುನಾವಣಾ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಲಿಂಗಮೂರ್ತಿ ಅವರು ಅಪಾರ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಇದಕ್ಕೂ ಮೊದಲು ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಇದಾದ ಬಳಿಕ ಚುನಾವಣಾ ಕಛೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ಸಹ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹಿರಿಯೂರು: ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ನಾಮಪತ್ರ ಸಲ್ಲಿಕೆ
ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಡಿ.ಸುಧಾಕರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಚುನಾವಣಾ ಕಚೇರಿಗೆ ಆಗಮಿಸಿದ ಸಚಿವ ಡಿ.ಸುಧಾಕರ್ ನಾಮಪತ್ರ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ. 2018ರಲ್ಲಿ ಸೋಲಿಗಿಂತ ಮುಂಚೆ ಕ್ಷೇತ್ರದ ಶಾಸಕನಾಗಿ ಹೇಗೆ ಇದ್ದೆ ಅದೇ ರೀತಿ ಕ್ಷೇತ್ರದ ಜನರ ಜೊತೆ ಇದ್ದೇನೆ. ಪ್ರತೀ ವಾರ ಹಳ್ಳಿಗಳಲ್ಲಿ ಸುತ್ತಾಡಿದ್ದೇನೆ. ನನ್ನ ಕಛೇರಿಯಲ್ಲಿ ಕುಳಿತು ಜನರ ಕಷ್ಟಗಳನ್ನು ಆಲಿಸಿ, ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿಕೊಂಡು ನಿರಂತರ ಸಂಪರ್ಕ ಇದ್ದೇನೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ನಿರಂತರ ಸಂಪರ್ಕ ಹೊಂದಿದ್ದರಿಂದ ಈ ಚುನಾವಣೆ ನನಗೆ ಹೊಸದಲ್ಲ ಎಂದರು.
ಈ ಕ್ಷೇತ್ರದ ಮತದಾರರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದರೆ, ತಾಲೂಕಿನ ಜನತೆಗೆ ಸ್ವಚ್ಛ ಮತ್ತು ದಕ್ಷ ಆಡಳಿತ ಕೊಡುತ್ತೇನೆ ಹಾಗೂ ಭ್ರಷ್ಟಾಚಾರ ರಹಿತವಾಗಿ, ಬಡವರಿಗೆ ನ್ಯಾಯಯುತ ಆಡಳಿತ ಕೊಡುತ್ತೇನೆ ಎಂದರು. ಎದುರಾಳಿ ಯಾವ ಪಕ್ಷ ಎಂದು ನನಗೆ ಗೊತ್ತಿಲ್ಲ. ಹಿಂದೆ ಹತ್ತು ವರ್ಷಗಳ ಕಾಲ ಶಾಸಕರಾಗಿದ್ದಾಗ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗಿದೆ. ಕ್ಷೇತ್ರದಲ್ಲಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೇ ನಾನು ಯಾವುದೇ ನಿರೀಕ್ಷೆ ಮಾಡುವುದಿಲ್ಲ ಆದರೆ ಒಳ್ಳೇ ಮಾರ್ಜಿನ್ ನಿಂದ ಗೆಲ್ಲುತ್ತೆನೆ. ನನ್ನ ಕ್ಷೇತ್ರದ ಮತದಾರರು ಅಭೂತಪೂರ್ವ ಗೆಲುವು ಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಗೆಲುವಿನ ಭರವಸೆ ವ್ಯಕ್ತಪಡಿಸಿದರು.
ನೀತಿ ಸಂಹಿತೆ ಉಲ್ಲಂಘಿಸಿದ ಅಭ್ಯರ್ಥಿ
ಚಿತ್ರದುರ್ಗ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಜಿ.ಎಚ್ ತಿಪ್ಪಾರೆಡ್ಡಿ ಅವರಿಂದ ನೀತಿಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ಚುನಾವಣಾ ಕಚೇರಿಯಲ್ಲಿ ನಡೆದಿರುವ ನಾಮಪತ್ರ ಸಲ್ಲಿಕೆ ವೇಳೆ ಶಾಸಕರ ಕಾರನ್ನು ಬ್ಯಾರಿಕೇಡ್ ತೆಗೆದು ಪೋಲಿಸರು ಒಳಬಿಟ್ಟಿದ್ದಾರೆ. ಸ್ಥಳದಲ್ಲೇ ಡಿವೈಎಸ್ಪಿ ಅನಿಲ್ ಕುಮಾರ್ ಇದ್ದರೂ ಸಹ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.












Click it and Unblock the Notifications