ಚಿತ್ರದುರ್ಗದಲ್ಲಿ 5 ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್ : ಮನೆಯಲ್ಲಿ ಡೆತ್ ನೋಟ್ ಪತ್ತೆ .!
ಚಿತ್ರದುರ್ಗ, ಡಿಸೆಂಬರ್, 29: ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಹಳೇ ಬೆಂಗಳೂರು ರಸ್ತೆಯ ಕಾರಾಗೃಹ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಬರೊಬ್ಬರಿ 5 ಅಸ್ಥಿಪಂಜರಗಳ ಪತ್ತೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಪಾಳು ಬಿದ್ದ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಐದು ಮಾನವ ಅಸ್ಥಿಪಂಜರಗಳ ಪತ್ತೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಜಗನ್ನಾಥ ರೆಡ್ಡಿಯ ಪುತ್ರ ನರೇಂದ್ರರೆಡ್ಡಿ ಅವರು 2013ರಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರಂತೆ. ಆರೋಪಿಯ ವಿರುದ್ಧ ಬೆಂಗಳೂರಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತಂತೆ. ಈ ಹಿನ್ನೆಲೆಯಲ್ಲಿ ಮನನೊಂದು ಅವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಪಾಳುಬಿದ್ದ ಮನೆಯಲ್ಲಿ 3 ಅಸ್ಥಿಪಂಜರಗಳು ಪತ್ತೆ
ಇನ್ನು ನಿನ್ನೆ (ಡಿಸೆಂಬರ್ 28) ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಹಳೆ ಬೆಂಗಳೂರು ರಸ್ತೆಯ ಜೈಲ್ ರಸ್ತೆಯ ಜಗನ್ನಾಥ ರೆಡ್ಡಿ ಸಮೀಲ್ ಇಂಜಿನಿಯರ್ ದೊಡ್ಡ ಸಿದ್ದವ್ವನಹಳ್ಳಿ ಎಂಬ ನಾಮಫಲಕ ಹೊಂದಿರುವ ಮನೆಯಲ್ಲಿ ಮೂರು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್, ಪಿಎಸ್ಐ ರಘು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಇನ್ನು ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ.
ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ ಸದರಿ ಮನೆಯ ನಿವಾಸಿಗಳು ನವೆಂಬರ್ 2022 ರಿಂದ ಯಾರಿಗೂ ಸಹ ಕಾಣದೆ ಇರುವುದು ಕಂಡುಬಂದಿರುತ್ತದೆಯಂತೆ. ನವೆಂಬರ್ ನಂತರದ ದಿನಗಳಲ್ಲಿ ಮನೆಯ ಸುತ್ತಮುತ್ತ ಸ್ವಲ್ಪ ದುರ್ವಾಸನೆ ಬಂದಂತಹ ಸ್ಥಿತಿಯಿತ್ತು. ನಾವು ಯಾವುದೋ ಪ್ರಾಣಿ ಸತ್ತಿರುವ ವಾಸನೆ ಬರುತ್ತದೆ ಎಂದು ತಿಳಿದುಕೊಂಡಿದ್ದೆವು ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಘಟನೆ ವಿವರ ಈಗಿರಬಹುದೇ?: 2019ರಲ್ಲಿ ದೊಡ್ಡ ಸಿದ್ದವ್ವನಹಳ್ಳಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ತನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 2 ಕೋಟಿ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಇದರಿಂದ ಬೇಸತ್ತು ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲಂತೆ. ಮನೆಗೆ ಯಾರೇ ಬಂದರೂ ಬಾಗಿಲು ತೆಗೆಯದೆ ಕಿಟಕಿಯಲ್ಲಿ ಮಾತಾಡಿಸಿ ಕಳುಹಿಸಿತಿದ್ದರು ಎನ್ನಲಾಗಿದೆ.
ಮನೆಯ ಸುತ್ತಮುತ್ತ ಬಿಗಿ ಬಂದೋಬಸ್ತ್
ಇನ್ನು ಮನೆಯ ಕೊಠಡಿ ಒಳಗಡೆ ಇರುವ ಮಂಚದ ಮೇಲೆ ಒಂದು ಅಸ್ಥಿಪಂಜರ, ನೆಲದ ಮೇಲೆ ಹಾಗೂ ಬಾಗಿಲು ಹಿಂದೆ ಅಸ್ಥಿ ಪಂಜರ ಕಂಡು ಬಂದಿದ್ದು, ಅಸ್ಥಿಪಂಜರ ಬಳಿ ಆಕ್ಸಿಜನ್ ಸಿಲಿಂಡರ್ ಕಂಡು ಬಂದಿವೆ. ಜಗನ್ನಾಥ ರೆಡ್ಡಿ, ಕೃಷ್ಣಾರೆಡ್ಡಿ, ಜಗನ್ನಾಥ ರೆಡ್ಡಿ ಪತ್ನಿಯ ಅಸ್ಥಿಪಂಜರಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದೀಗ ಮನೆಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮನೆಯ ಸುತ್ತಮುತ್ತ ಬ್ಯಾರಿಕೇಡ್ ಹಾಕಿ, ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.












Click it and Unblock the Notifications