ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿಯಾಗಿ ಜಾಂಬವಂತ ಸಾವು
ಚಿತ್ರದುರ್ಗ, ಜುಲೈ, 20: ನಗರದ ಹೊರವಲಯದಲ್ಲಿ ಹಾದುಹೋಗುವ ಕ್ಯಾದಿಗೆರೆ ಮತ್ತು ಸೀಬಾರ ರಾಷ್ಟ್ರೀಯ ಬೈಪಾಸ್ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಜಾಂಬವಂತ ಮೃತಪಟ್ಟ ಘಟನೆ ನಡೆದಿದೆ.
ತಮಟೆಕಲ್ಲು ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವಾಹನ ಕರಡಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶ ಹೊಂದಿಕೊಂಡಂತೆ ಸುತ್ತಮುತ್ತ ಬೃಹತ್ ಕಲ್ಲು ಬಂಡೆಗಳ ಗುಡ್ಡಗಾಡು ಇರುವುದರಿಂದ ವನ್ಯಜೀವಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಕರಡಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿದೆ.
ಇನ್ನು ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿಯಲ್ಲೇ ಕೊನೆಯುಸಿರೆಳೆದಿದೆ. ಮತ್ತೊಂದು ಕಡೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಿರತೆ, ಕರಡಿ, ಹುಲಿ, ಜಿಂಕೆ ಇನ್ನಿತರ ಕಾಡುಪ್ರಾಣಿಗಳು ರಸ್ತೆ ಅಪಘಾತಕ್ಕೆ ಸಿಲುಕಿ ಮೃತಪಡುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸುವಂತೆ ಮಾಡಿದೆ.
ಸಿಡಿಮದ್ದು ಜಗಿದು ಜಾಂಬವಂತ ಸಾವು:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಜಮೀನನಲ್ಲಿ ಹಂದಿಗಳ ಬೇಟೆಗೆ ಇಟ್ಟಿದ್ದ ನಾಡ ಸಿಡಿಮದ್ದು ಸಿಡಿದು ಕರಡಿ ಸಾವಿಗೀಡಾದ ಘಟನೆ ನಡೆದಿದೆ.
ಗ್ರಾಮದ ಮಹದೇವಪ್ಪ ಎಂಬುವರ ಮಗ ಮಹದೇವಸ್ವಾಮಿ ಎಂಬುವರಿಗೆ ಸೇರಿದ ಕಬ್ಬಿನ ತೋಟದಲ್ಲಿ ಇಟ್ಟಿದ್ದ ಸಿಡಿಮದ್ದು ತಿನ್ನಲು ಹೋಗಿದ್ದ 6 ವರ್ಷ ವಯಸ್ಸಿನ ಗಂಡು ಕರಡಿಯ ಬಾಯಿಗೆ ಸಿಡಿದು ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ವಿಷಯ ತಿಳಿದ ಓಂಕಾರ್ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಇನ್ನು ಸಿಡಿಮದ್ದು ಇಟ್ಟಿದ್ದ ಜಮೀನು ಮಾಲೀಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಕೊನೆಯದಾಗಿ ಗುರುವಾರ ಮರಣೋತ್ತರ ಪರೀಕ್ಷೆ ನಡೆಸಿ ಕರಡಿಯ ಕಳೇಬರವನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications