Dengue Fever: ಹಿರಿಯೂರಿನಲ್ಲಿ ಡೆಂಘೀ ಜ್ವರಕ್ಕೆ 7 ವರ್ಷದ ಬಾಲಕ ಬಲಿ
ಹಿರಿಯೂರು, ಆಗಸ್ಟ್, 23: ಇದೀಗ ಮಳೆಗಾಲ ಆದ್ದರಿಂದ ಸೊಳ್ಳೆಗಾಲ ಕಾಟ ಹೆಚ್ಚಾಗಿದ್ದು,ಈ ಬಗ್ಗೆ ವೈದ್ಯರು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಮಹಾಮಾರಿ ಡೆಂಘೀ ಜ್ವರ ತಾಂಡವಾಡುತ್ತಿದ್ದು, ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ 7 ವರ್ಷದ ಬಾಲಕ ಡೆಂಘೀಗೆ ಬಲಿಯಾಗಿದ್ದಾನೆ.
ಹಿರಿಯೂರು ತಾಲ್ಲೂಕಿನ ಮೆಟಿಕುರ್ಕೆ ಗ್ರಾಮದ ಹನುಮಂತಪ್ಪ ಹಾಗೂ ಕವಿತಾ ಅವರ 7 ವರ್ಷದ ಪುತ್ರ ಜಗನ್ನಾಥ ಮೃತಪಟ್ಟಿದ್ದಾನೆ.

ಮೃತ ಬಾಲಕನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಪೋಷಕರು ಗ್ರಾಮದಲ್ಲಿ ಸ್ವಚ್ಛತೆ ಇಲ್ಲ, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ನಿಂತ ನೀರು ನಿಂತಲ್ಲೇ ನಿಲ್ಲುತ್ತವೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದರು.
140 ಮಂದಿ ಬಲಿ: ಚಾಮರಾಜನಗರದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಹೆಲ್ಮೆಟ್ ಹಾಕದೇ ಬೈಕ್ ಸವಾರರು ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಾಗಾದರೆ 2024ರ ಜನವರಿ ತಿಂಗಳಿನಿಂದ ಇಲ್ಲಿವರೆಗೂ ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿ ಮೃತಪಟ್ಟವರ ಸಂಖ್ಯೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜನವರಿಯಿಂದ ಜುಲೈ ತನಕ 134 ಮಂದಿ ಅಸುನೀಗಿದ್ದು, ಆಗಸ್ಟ್‌ವರೆಗೆ ಇದರ ಸಂಖ್ಯೆ 140 ದಾಟಿದೆ. ಜುಲೈ ತಿಂಗಳಲ್ಲಿ 22 ಮಂದಿ ರಸ್ತೆ ಅಪಘಾತದಲ್ಲಿ ಅಸುನೀಗಿದ್ದು, ಇವರಲ್ಲಿ 15 ಮಂದಿ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಇದ್ದದ್ದು ಕಂಡುಬಂದಿದೆ.
ರಾಷ್ಟ್ರೀಯ ಹೆದ್ದಾರಿ ಮತ್ತು ಬೈಪಾಸ್ ರಸ್ತೆ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿರುವುದರಿಂದ ಅತಿವೇಗದ ಬೈಕ್ ಚಾಲನೆ ಹೆಚ್ಚಾಗುತ್ತಿದೆ. ಜೊತೆಗೆ, ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ರಸ್ತೆ ಅಪಘಾತದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿದ್ದು, ಅತಿವೇಗದ ಚಾಲನೆ ಮತ್ತು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಮೂಲಕ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ, ಈಗಾಗಲೇ ಎಲ್ಲಾ ಠಾಣೆಗಳಲ್ಲೂ ಸಂಚಾರಿ ನಿಯಮ ಜಾಗೃತಿ ಮೂಡಿಸಲಾಗುತ್ತಿದ್ದು, ದಂಡ ಕಟ್ಟಿಸುವ ಬದಲು ಹೆಲ್ಮೆಟ್ ಖರೀದಿಸಿ ತಂದು ಬೈಕ್ ತೆಗೆದುಕೊಂಡು ಹೋಗುವಂತೆ ಅರಿವು ಮೂಡಿಸಲಾಗುತ್ತಿದೆ. ಅತೀ ಹೆಚ್ಚು ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಂಡವರು ಬಹಳಷ್ಟು ಮಂದಿ ಇದ್ದು, ಅವರು ಹೆಲ್ಮೆಟ್ ಧರಿಸಿದ್ದರೇ ಪಾರಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು ಎಂದರು.
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದ ಚಾಲನೆ ಕಂಡುಬರುತ್ತಿದ್ದ ಹಿನ್ನೆಲೆ ಸ್ಪೀಡ್ ಲೇಸರ್ ಗನ್ ಮೂಲಕ ಅತಿವೇಗ ಚಾಲನೆ ಮಾಡಿದವರಿಗೆ ದಂಡ ಹಾಕಲಾಗುತ್ತಿದೆ. ಅಲ್ಲದೆ, ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದರು.












Click it and Unblock the Notifications