ಫಾರಿನ್ ಯೂನಿವರ್ಸಿಟಿಯಲ್ಲಿ ಪಿಎಚ್‌ಡಿ: ಮಹಿಳೆಗೆ 75 ಲಕ್ಷ ರೂ ಪಂಗನಾಮ
ಚಿಕ್ಕಮಗಳೂರು, ಅಕ್ಟೋಬರ್ 28 : ಚಿಕ್ಕಮಗಳೂರು ನಗರದ ಸಾಫ್ಟ್‌ವೇರ್ ಉದ್ಯೋಗಿ ಮಹಿಳೆಯೊಬ್ಬರು, ಪಿಎಚ್‌ಡಿಗಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ಪಿಎಚ್‌ಡಿ ಪಡೆಯಲು ಆನ್‌ಲೈನ್‌ನಲ್ಲಿ ಫಾರಿನ್ ಯೂನಿವರ್ಸಿಟಿಗಳನ್ನು ಹುಡುಕಾಡಿದ್ದಾರೆ. ಈ ವೇಳೆ ನೆಸ್ಟರ್ ಎಂಬ ಯೂನಿವರ್ಸಿಟಗೆ ಮಹಿಳೆ ಅರ್ಜಿ ಸಲ್ಲಿಸಿದ್ದು, ತಮ್ಮ ಎಲ್ಲಾ ಶೈಕಕ್ಷಣಿಕ ದಾಖಲೆಗಳನ್ನು ನೀಡಿದ್ದಾರೆ. ಮಹಿಳೆಯ ಪ್ರಕಾರ 2018 ಆಕೆ ಆ ಯೂನಿವರ್ಸಿಟಿಗೆ ದಾಖಲಾಗಿದ್ದಾರೆ. ನಾಲ್ಕು ವರ್ಷದಲ್ಲಿ ಯೂನಿವರ್ಸಿಟಿ ಶುಲ್ಕ ಹೆಸರಿನಲ್ಲಿ ಕೇಳಿದ ಬರೋಬ್ಬರಿ 75 ಲಕ್ಷ ರೂಪಾಯಿ ಹಣವನ್ನು ಮಹಿಳೆ ಯೂನಿವರ್ಸಿಟಿಗೆ ನೀಡಿದ್ದಾರೆ.
ನಾಲ್ಕು ವರ್ಷಗಳ ಬಳಿಕ ನೆಸ್ಟರ್ ಹೆಸರಿನ ಯೂನಿವರ್ಸಿಟಿಗೆ ಮಹಿಳೆಗೆ ಪಿಎಚ್‌ಡಿ ಸರ್ಟಿಫಿಕೇಟ್ ನೀಡಿದ್ದಾರೆ. ಈ ಪ್ರಮಾಣ ಪತ್ರವನ್ನು ಬೇರೆ ವ್ಯಕ್ತಿಗೆ ತೋರಿಸಿದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ಪಿಎಚ್‌ಡಿ ಹೆಸರಿನಲ್ಲಿ ಸೈಬರ್ ವಂಚಕರು ಆಕೆಯನ್ನು ಮೋಸಗೊಳಿಸಿದ್ದು, 75 ಲಕ್ಷ ರೂಪಾಯಿ ಹಣ ಪಡೆದು ನಕಲಿ ಪ್ರಮಾಣ ಪತ್ರ ನೀಡಿದ್ದಾರೆ.

ತಾನು ಮೋಸ ಹೋಗಿದ್ದೇನೆ ಎಂದು ಗೊತ್ತಾದ ಬಳಿಕ ವಿಚಾರಿಸಿದ ಮಹಿಳೆಗೆ ಅಸಲಿಗೆ ಆ ಯುನಿವರ್ಸಿಟಿಯೇ ಇಲ್ಲ ಎಂದು ಆಕೆಗೆ ನಾಲ್ಕು ವರ್ಷಗಳ ಬಳಿಕ ಗೊತ್ತಾಗಿದೆ. ಈ ಮಹಿಳೆ ಹಾಕಿದ 75 ಲಕ್ಷ ರೂಪಾಯಿ ಹಣ ಕೂಡ ಬ್ಯಾಂಕ್ ಮೂಲಕ ನಡೆದಿದ್ದು, ಹಣವನ್ನು ಯಾರಿಗೆ ಹಾಕಿದ್ದಾರೆ ಎನ್ನುವುದುದೇ ಆಕೆಗೆ ಗೊತ್ತಿಲ್ಲ. ಪಿಎಚ್‌ಡಿ ಸರ್ಟಿಫಿಕೇಟ್‌ಗಾಗಿ ನಾಲ್ಕು ವರ್ಷದಲ್ಲಿ 75 ಲಕ್ಷ ರೂಪಾಯಿ ಹಣ ಕಳೆದುಕೊಂಡ ಮೇಲೆ ಮೋಸ ಹೋದ ಮಹಿಳೆ ಚಿಕ್ಕಮಗಳೂರು ನಗರದ ಸಿಇಎನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಹಿಳೆಯ ವೃತ್ತಾಂತ ಕೇಳಿದ ಪೊಲೀಸರೇ ದಂಗಾಗಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಮಹಿಳೆ ನೀಡಿರುವ ಹಣ ಯಾರಿಗೆ ಹೋಗಿದೆ ಎನ್ನುವುದು ಪೊಲೀಸರಿಗೆ ತಿಳಿದು ಬಂದಿದೆ. ಸಿಐಡಿ, ಬೆಂಗಳೂರು ಸೈಬರ್ ಪೊಲೀಸರ ಜೊತೆ ಚಿಕ್ಕಮಗಳೂರು ನಗರದ ಸಿಇಎನ್ ಪೊಲೀಸರು ಸಂಪರ್ಕದಲ್ಲಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಈ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡಿದರೆ ನಿಮಗೆ ವಿದೇಶಕ್ಕೆ ಹೋಗಲು ಅವಕಾಶ ಸಿಗುತ್ತದೆ ಎಂದು ನಂಬಿಸಿ ವಂಚಕರು ಮಹಿಳೆಯಿಂದ 75 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ.












Click it and Unblock the Notifications