ಚಿಕ್ಕಮಗಳೂರು: ಕಾರು, ಟಿಪ್ಪರ್ ಲಾರಿ, ಬೈಕ್ ನಡುವೆ ಭೀಕರ ಅಪಘಾತ, ದಂಪತಿ ಸಾವು
ಚಿಕ್ಕಮಗಳೂರು, ಸೆಪ್ಟೆಂಬರ್, 13: ಮಂಗಳವಾರ (ಸೆಪ್ಟೆಂಬರ್ 12) ತಡರಾತ್ರಿ ಕಾರು, ಟಿಪ್ಪರ್ ಲಾರಿ, ಬೈಕ್ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ನಡೆದಿದೆ.
ಶಿವಮೊಗ್ಗ ಮೂಲದ ಸಯ್ಯದ್ ಆಸೀಫ್ (38), ಮಾಜಿನಾ (33) ಅಪಘಾತದಲ್ಲಿ ಸಾವನ್ನಪ್ಪಿದ ದಂಪತಿ. ಇನ್ನು ಈ ದಂಪತಿಯ 14 ತಿಂಗಳ ಮಗುವಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿರುವಾಗ ಬೈಕ್‌ಗೆ ಟಿಪ್ಪರ್ ಲಾರಿ ಚಾಲಕ ಡಿಕ್ಕಿ ಹೊಡೆದಿದ್ದು, ಈ ವೇಳೆ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಎನ್ನಲಾಗಿದೆ.

ಚಾರ್ಮಾಡಿ ಘಾಟ್ ಬಳಿ ಎರಡು ಅಪಘಾತ
ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಳೆ ಜೊತೆ ದಟ್ಟ ಮಂಜು ಕವಿದಿದ್ದು, ವಾಹನ ಸವಾರರು ಪಾರ್ಕಿಂಗ್ ಲೈಟ್, ಹೆಡ್‍ಲೈಟ್, ಫಾಗ್ ಲೈಟ್ ಹಾಕಿಕೊಂದು ಹೋದರೂ ವಾಹನ ಸಂಚಾರ ದುಸ್ತರವಾಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. 22 ಕಿ.ಮೀ. ವ್ಯಾಪ್ತಿಯ ಕೊಟ್ಟಿಗೆಹಾರ-ಚಾರ್ಮಾಡಿ ಮಾರ್ಗದಲ್ಲಿ ಭಾರೀ ಮಂಜು ಕವಿದಿದ್ದು, ಆ ಮಂಜಿನಲ್ಲಿ ವಾಹನ ಸಂಚಾರಿಸಲಾಗದೆ ಸಂಜೆ ಎರಡು ಅಪಘಾತಗಳು ಕೂಡ ಸಂಭವಿಸಿದ್ದವು.
ಬಿದಿರುತಳ ಗ್ರಾಮದ ಬಸ್ ನಿಲ್ದಾಣದ ಬಳಿ ಮಂಗಳೂರಿಗೆ ಹೋಗುತ್ತಿದ್ದ ಬೊಲೆರೋ ವಾಹನವೊಂದು ದಟ್ಟ ಮಂಜಿನಲ್ಲಿ ಸರಿಯಾಗಿ ದಾರಿ ಕಾಣದೆ ರಸ್ತೆಯ ಒಂದು ಬದಿಯ ಪ್ರಪಾತಕ್ಕೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಗೆ ಡಿಕ್ಕಿಯೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಅಣ್ಣಪ್ಪಸ್ವಾಮಿ ದೇಗುಲದ ಸಮೀಪದ ಕಿರಿದಾದ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದ ಕಾರಣ ದಾರಿ ಕಾಣದೆ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಸರ್ಕಾರಿ ಬಸ್ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮುಗಿಸಿ ಧಾರವಾಡಕ್ಕೆ ಹೊರಟಿದ್ದ ಬೊಲೆರೋ ಕಾರು ಅತಿಯಾದ ತಿರುವಿನ ಕಿರಿ ರಸ್ತೆಯಲ್ಲಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯೊಡೆದಿದ್ದು, ಪರಿಣಾಮ ತಡೆಗೋಡೆಯೇ ಕುಸಿದು ಬಿದ್ದಿದೆ. ಕಾರು ಹಾಗೂ ಬಸ್ಸಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದವು.
ಈ ಸಣ್ಣ ಕಿರು ರಸ್ತೆಯಲ್ಲಿ ಸಾವಿರಾರು ಅಡಿ ಪ್ರಪಾತವಿದ್ದು, ಸ್ವಲ್ಪ ಹೆಚ್ಚು-ಕಡಿಮೆಯಾಗಿದ್ದರೂ ಬಸ್ ಹಾಗೂ ಕಾರು ಎರಡು ಪ್ರಪಾತಕ್ಕೆ ಬೀಳುತ್ತಿತ್ತು. ಆದರೆ, ಬಹುದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಚಾರ್ಮಾಡಿ ಘಾಟಿಯ ಈ ರಸ್ತೆಯಲ್ಲಿ ಕಿರು ರಸ್ತೆ ಅಂದಿನಿಂದಲೂ ಇದೆ. ಹೆದ್ದಾರಿ ಪ್ರಾಧಿಕಾರ ಈ ಚಿಕ್ಕ ರಸ್ತೆಯನ್ನು ಅಗಲ ಮಾಡಬೇಕೆಂದು ಸ್ಥಳಿಯರು ಮನವಿ ಮಾಡಿದ್ದರು.
ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಡೆಕೇಡಿಸಿಕೊಳ್ಳದ ಕಾರಣ ಇಂದು ಈ ಅನಾಹುತ ಸಂಭವಿಸಿದೆ ಎಂದು ಸ್ಥಳಿಯರು ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಈಗ ಘಾಟಿಯಲ್ಲಿ ಭಾರೀ ಮಂಜು ಕವಿದಿದೆ. ತಡೆಗೋಡೆ ಬೇರೆ ಕುಸಿದಿದೆ. ರಸ್ತೆಯೂ ಕಿರಿದಾದ ರಸ್ತೆ. ಮತ್ತೊಂದು ಅನಾಹುತ ಸಂಭವಿಸೋ ಮೊದಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ರಸ್ತೆಗೊಂದು ಬಂದೋಬಸ್ತ್ ಕಲ್ಪಿಸಿ ಶೀಘ್ರದಲ್ಲೇ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದರು.












Click it and Unblock the Notifications