ಪ್ರವಾಸಿಗರೇ ಗಮನಿಸಿ..! ಚಿಕ್ಕಮಗಳೂರಿನ ಎತ್ತಿನ ಭುಜ ಚಾರಣಕ್ಕೆ ತಾತ್ಕಾಲಿಕ ನಿಷೇಧ
ಚಿಕ್ಕಮಗಳೂರು, ಆಗಸ್ಟ್ 03: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಎತ್ತಿನ ಭುಜಕ್ಕೆ ಚಾರಣ ತೆರಳುವುದಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಚಿಕ್ಕಮಗಳೂರು ಇವರ ಆದೇಶದಂತೆ ಮೂಡಿಗೆರೆ ವಲಯ ಅರಣ್ಯ ಅಧಿಕಾರಿಗಳ ಕಛೇರಿಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆ.

ಮೂಡಿಗೆರೆ ವಲಯ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ, ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸುತ್ತಿರುವುದರಿಂದ, ರಸ್ತೆಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿರುವುದರಿಂದ, ಹಾಗೆಯೇ ಫೋಟೋ ತೆಗೆಯುವ ಸಂದರ್ಭದಲ್ಲಿ ಅಪಾಯಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಅಪಾಯ ಸಂಭವಿಸಿದಾಗ ಸಂದರ್ಭದಲ್ಲಿ ತುರ್ತಾಗಿ ಘಟನಾ ಸ್ಥಳಕ್ಕೆ ತೆರಳಲು ಕಷ್ಟಸಾಧ್ಯವಾಗಿರುತ್ತದೆ.
ಆದ್ದರಿಂದ ಮುಂಜಾಗೃತ ಕ್ರಮವಾಗಿ ಯಾವುದೇ ರೀತಿಯ ಪ್ರಾಣಹಾನಿ ಮತ್ತು ಅಪಾಯ ಉಂಟಾಗದಂತೆ ತಡೆಗಟ್ಟುವ ಹಿತದೃಷ್ಟಿಯಿಂದ ಎತ್ತಿನ ಭುಜಕ್ಕೆ ಚಾರಣ ಹೋಗುವುದನ್ನು ಮುಂದಿನ ಆದೇಶದ ವರೆಗೂ ತಡೆಹಿಡಿಯಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಎತ್ತಿನ ಭುಜವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಪಶ್ಚಿಮ ಘಟ್ಟಗಳ ಪರ್ವತದ ಶಿಖರವಾಗಿದೆ. ಇದು 4,265 ಅಡಿ ಎತ್ತರವನ್ನು ಹೊಂದಿದೆ. ಇದು ಕರ್ನಾಟಕದ ಜನಪ್ರಿಯವಾದ ಚಾರಣ ಸ್ಥಳವಾಗಿದೆ. ಏಕೆಂದರೆ ಕೊನೆಯ ಎರಡು ಕಿಲೋಮೀಟರ್‌ಗಳನ್ನು ಪ್ರವಾಸಿಗರು ಟ್ರಕ್ಕಿಂಗ್ ಮೂಲಕ ಶಿಖರದ ಸಮೀಪವಿರುವ ಬಿಂದುವನ್ನು ತಲುಪಬಹುದಾಗಿದೆ. ಎತ್ತಿನ ಭುಜದ ಸೌಂದರ್ಯಕ್ಕೆ ಮಾರುಹೋಗದರಿಲ್ಲ ಎನ್ನುವಷ್ಟರ ಮಟ್ಟಿಗೆ ಎತ್ತಿನ ಭುಜವು ಪಾಕೃತಿಕ ಸೌಂದರ್ಯವನ್ನು ಹೊಂದಿದೆ.
ಇನ್ನು ಮಾನ್ಸೂನ್ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರಿನ ಸೌಂದರ್ಯ ದುಪಟ್ಟಾಗಿದ್ದು, ಜಿಲ್ಲೆ, ನೆರೆ ಜಿಲ್ಲೆ ಅಲ್ಲದೇ ಕರ್ನಾಟಕದ ಮೂಲೆ ಮೂಲೆಯಿಂದ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ. ಪಾಕೃತಿಕ ಸೌಂದರ್ಯದಿಂದ ಸಮೃದ್ಧವಾಗಿರುವ ಕಾಫಿನಾಡಿನ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದು, ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ.












Click it and Unblock the Notifications