ರಣಮಳೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರನೇ ಬಲಿ
ಚಿಕ್ಕಮಗಳೂರು, ಜುಲೈ, 26: ಧಾರಾಕಾರ ಮಳೆಯಿಂದ ಜಲಾವೃತವಾಗಿದ್ದ ಅಡಿಕೆ ತೋಟ ನೋಡಲು ತೆರಳಿದ್ದ ವೃದ್ದೆ ಕಾಲು ಜಾರಿ ನಾಯು ಹಳ್ಳಕ್ಕೆ ಬಿದ್ದು ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಸಿದ್ದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಸಂಜೆ ತೋಟ ನೋಡಲು ತೆರಳಿದ್ದ ವೃದ್ಧೆ ಅಡಿಕೆ ತೋಟದ ಸಮೀಪ ಹರಿಯುತ್ತಿದ್ದ ನಾಯು ಹಳ್ಳಕ್ಕೆ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದರು. ನಂತರ ನಾಪತ್ತೆಯಾದ ವೃದ್ಧೆ ಶವಕ್ಕಾಗಿ ತೀವ್ರ ಹುಡುಗಾಟ ನಡೆಸಿದ್ದು, ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಇನ್ನು ಸಾವನಪ್ಪಿದ ವೃದ್ಧೆಯನ್ನ ರೇವಮ್ಮ (62) ಎಂದು ಗುರುತಿಸಲಾಗಿದೆ.

ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಮೀಪದ ತಾಯಿಹಳ್ಳ ಎಂಬ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದ ಅಡಿಕೆ ತೋಟ ಜಲಾವೃತಗೊಂಡಿತ್ತು. ನಂತರ ವೃದ್ಧೆ ರೇವಮ್ಮ ತೋಟವನ್ನು ವೀಕ್ಷಣೆ ಮಾಡಲು ಹೋದಾಗ ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ.
ತಾಯಿ ಹಳ್ಳದ ಬಳಿ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಿ ಹುಡುಕಾಡ ನಡೆಸಿದ ಬಳಿಕ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಮನೆಗೋಡೆ ಕುಸಿದು ವೃದ್ದೆ ಸಾವು
ಹಾಗೆಯೇ ಮತ್ತೊಂದೆಡೆ ಭಾರೀ ಗಾಳಿ, ಮಳೆಗೆ ಮನೆಗೋಡೆ ಕುಸಿದು ವೃದ್ದೆ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಡೆದಿದೆ.
ಕುಸಿದ ಗೋಡೆಯಡಿ ಸಿಲುಕಿ ಗೌರಮ್ಮ (62) ಸಾವನ್ನಪ್ಪಿದ್ದು, ಇನ್ನು ವೃದ್ಧೆ ಪತಿ ನಟರಾಜ್ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಈ ಅವಘಡ ಸಂಭವಿಸಿದೆ.
ಮಂಗಳವಾರ ರಾತ್ರಿ ವೃದ್ಧೆ ಗೌರಮ್ಮ ಮನೆಯೊಳಗೆ ಅಡುಗೆ ಮಾಡುತ್ತಾ ಕುಳಿತಿದ್ದರು. ಈ ವೇಳೆ ಏಕಾ ಏಕಿ ಮನೆ ಗೋಡೆ ಕುಸಿದು ವೃದ್ದೆ ಗೌರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡ ವೃದ್ಧೆ ಪತಿ ನಟರಾಜ್‌ಗೆ ಅರಸೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.












Click it and Unblock the Notifications