ಸೋತ ತಕ್ಷಣ ಆಯೋಗದ ಮೇಲೆ ದೂರು ಸಲ್ಲಿಸಲು ಡಿಕೆಶಿ ಸಿದ್ಧರಾಗಿದ್ದಾರೆ-ಸಿ.ಟಿ.ರವಿ ವ್ಯಂಗ್ಯ
ಚಿಕ್ಕಮಗಳೂರು, ಮಾರ್ಚ್ 28: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದು ಹೇಳಿಕೆ ಸಿದ್ಧವಾಗಿಟ್ಟುಕೊಂಡಿರಬೇಕು. ಸೋತ ತಕ್ಷಣ ಆಯೋಗದ ಮೇಲೆ ದೂರು ಸಲ್ಲಿಸಲು, ನ್ಯಾಯ ಸಮ್ಮತ ಚುನಾವಣೆ ಆಗಿಲ್ಲ ಎನ್ನುವುದು, ಇ.ವಿ.ಎಂ. ಮೇಲೆ ದೂರುವುದು. ಈ ಎಲ್ಲಾ ಹೇಳಿಕೆ ಸಿದ್ಧವಾಗಿಕೊಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಣರಂಗದಲ್ಲಿ ಕುರುಕ್ಷೇತ್ರ ಕಾಲದಿಂದಲೂ ನೋಡಿದ್ದೇವೆ. ದುರ್ಯೋಧನನು ಬಂದು ಕೃಷ್ಣನನ್ನು ಭೇಟಿಯಾಗಿದ್ದನು. ದುರ್ಯೋಧನ ಕೃಷ್ಣನನ್ನು ಭೇಟಿಯಾಗಿದ್ದನು, ಅರ್ಜುನ, ದುರ್ಯೋಧನ ಏಕಕಾಲಕ್ಕೆ ಕೃಷ್ಣನ ಬಳಿ ಹೋಗುತ್ತಾರೆ.ಅದರೆ, ಕೃಷ್ಣನ ಒಲವಿದ್ದದ್ದು ಪಾಂಡವರ ಪರ ಕೌರವರ ಪರವಾಗಿ ಅಲ್ಲ ಎಂದು ಮಹಾಭಾರತದ ಕಥೆಯ ಮೂಲಕ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದರು.

ಮಾತು ಮುಂದುವರಿಸಿದ ಸಿ.ಟಿ ರವಿ, ಕುರುಕ್ಷೇತ್ರ ಫಲಿತಾಂಶ ಕೌರವರ ನಾಶ ಪಾಂಡವರ ಜಯ. ಎಲ್ಲವೂ ಆ ಕಾಲದಿಂದಲೂ ನಡೆದದ್ದೇ ಹೊಸದೇನು ಇಲ್ಲ. ಕೃಷ್ಣನ ಆಶೀರ್ವಾದ ಪಾಂಡವರ ಪರ ಜನರ ಆಶೀರ್ವಾದ ಬಿಜೆಪಿ ಪರ ಎಂದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ 365 ದಿನ ಜನಗಳ ಜೊತೆ ಕೆಲಸ ಮಾಡಿದೆ
ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಮಾತನಾಡಿದ ಅವರು, ನಿರಂತರ ಕೆಲಸ ಮಾಡಿದವರು ಚುನಾವಣೆ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡುವ ಅವಶ್ಯಕತೆ ಇಲ್ಲ. ಅಂದಿನ ಪಾಠ ಅಂದೆ ಓದುವ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ತಯಾರಾಗುವ ಅವಶ್ಯಕತೆ ಇಲ್ಲ. ಬಿಜೆಪಿ ಕೂಡ 365 ದಿನ ಜನಗಳ ಜೊತೆ ಇದ್ದು ಕೆಲಸ ಮಾಡಿದೆ. ಹಾಗಾಗಿ, ಚುನಾವಣೆಗೆ ಎಂದು ವಿಶೇಷವಾದ ತಯಾರಿ ಮಾಡುವ ಅವಶ್ಯಕತೆ ಬರುವುದಿಲ್ಲ ಎಂದು ಭಾವಿಸಿದ್ದೇನೆ. ಕಳೆದ ಬಾರಿಯೂ ಹೇಳಿದ್ದೆ ಈಗಲೂ ಹೇಳುತ್ತೇನೆ. ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮೀಸಲಾತಿ ವಿವಾದದ ಬಗ್ಗೆ ಮಾತನಾಡಿದ ಸಿ.ಟಿ ರವಿ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಾಕಲು ನಮ್ಮದು ಕಾಂಗ್ರೆಸ್ ಸರ್ಕಾರವಲ್ಲ. ಎಲ್ಲರಿಗೂ ನ್ಯಾಯ ಕೊಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಕೆಲವರು ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಾರೆ. ಸದಾಶಿವ ಆಯೋಗ ನಿಗದಿ ಮಾಡಿದ್ದೇ 3 ಪರ್ಸೆಂಟ್, ನಾವು ಕೊಟ್ಟಿರೋದು ನಾಲ್ಕುವರೆ ಪರ್ಸೆಂಟ್ .ಹಿಂದಿನ ಕಾಂಗ್ರೆಸ್ ಸರ್ಕಾರ 2.50 ಯಿಂದ 3 ಪರ್ಸೆಂಟ್ ಕೊಡಬೇಕೆಂದು ಡ್ರಾಫ್ಟ್ ರೆಡಿ ಮಾಡಿತ್ತು ಎಂದರು.

ನಾವು 4.50 ಪರ್ಸೆಂಟ್ ಕೊಟ್ಟಿದ್ದೇವೆ, ಆತಂಕ ಪಡುವ ಅಗತ್ಯವಿಲ್ಲ. ಸದಾಶಿವ ಆಯೋಗ ಕೊಟ್ಟಿದ್ದಕ್ಕಿಂತ ಜಾಸ್ತಿ ಕೊಟ್ಟಿದ್ದೇವೆ. ಯಾರಿಗಾದರೂ ಅನ್ಯಾಯವಾಗಿದೆ ಎನಿಸಿದರೆ ನ್ಯಾಯ ಕೊಡಲು ಸರ್ಕಾರ ಬದ್ಧವಾಗಿದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕವಾಗಿ ಹೇಳಿದ್ದಾರೆ, ಆತಂಕ ಪಡುವ ಅಗತ್ಯವಿಲ್ಲ. ಬಂಜಾರ-ಭೋವಿ ಸಮಾಜ ಬಿಜೆಪಿ ಜೊತೆಗಿದೆ, ನಾವು ಅವರ ಜೊತೆಗಿದ್ದೇವೆ. ಯಾರನ್ನು ಬಿಟ್ಟು ಕೊಡುವುದಿಲ್ಲ, ಯಾರನ್ನು ಕಡೆಗಣಿಸುವುದೂ ಇಲ್ಲ ಎಂದು ಹೇಳಿದರು.
ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ
ಇನ್ನು ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲ್ಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ರಾಜ್ಯದಲ್ಲಿ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13ರಂದು ಅಧಿಸೂಚನೆ, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನು ಏಪ್ರಿಲ್ 21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ಹೀಗಾಗಿ ಕರ್ನಾಟಕ ಚುನಾವಣೆಯ ಕಣ ಇನ್ನಷ್ಟು ರಂಗೇರಿದೆ.












Click it and Unblock the Notifications