ಕುದುರೆಮುಖ ಚಾರಣಕ್ಕೆ ಅವಕಾಶ: ಆನ್‌ಲೈನ್ ಮೂಲಕ ಬುಕ್ ಮಾಡುವುದು ಹೇಗೆ?
ಚಿಕ್ಕಮಗಳೂರು, ಏಪ್ರಿಲ್ 27: ಚಾರಣ ಪ್ರಿಯರಿಗೆ ಕರ್ನಾಟಕದ ಅರಣ್ಯ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ಪಶ್ಚಿಮ ಘಟ್ಟಗಳಲ್ಲಿನ ಎತ್ತರದ ಶಿಖರವಾದ ಕುದುರೆಮುಖದ ಚಾರಣ ಪಥಗಳು ಪ್ರವಾಸಿಗರಿಗೆ ಮುಕ್ತವಾಗಿದೆ. ಮೇ 1ರಿಂದ ಚಾರಣವನ್ನು ನಡೆಸಬಹುದಾಗಿದ್ದು, ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಕುದುರೆಮುಖ ಪಶ್ಚಿಮ ಘಟ್ಟಗಳಲ್ಲಿನ ಎತ್ತರದ ಶಿಖರವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 6,215 ಅಡಿ ಎತ್ತರವಿದೆ. ಕುದುರೆಮುಖ ಚಾರಣ (ಟ್ರಕ್ಕಿಂಗ್) ಮಾಡುವುದು ಹೆಜ್ಜೆ ಹೆಜ್ಜೆಗೂ ರೋಮಾಂಚಕ ಅನುಭವವಾಗಿದೆ. ಈಗ ಇಲ್ಲಿ ಚಾರಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹ ಪರ್ವತ, ಹಿಡ್ಲುಮನೆ ಜಲಪಾತ, ಕೊಡಚಾದ್ರಿ ಚಾರಣ ಪಥಗಳು ಮೇ 1ರಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ. ಆನ್‌ಲೈನ್ ಮೂಲಕ ಮೊದಲೇ ನೋಂದಣಿ ಮಾಡಿಸಿಕೊಂಡು, ಪ್ರವಾಸಿಗರು ಚಾರಣ ಕೈಗೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.
ಈ ಕುರಿತು ಕುದುರೆಮುಖ ವನ್ಯಜೀವಿ ವಿಭಾಗ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ವಿಶಾಲವಾದ ಹಚ್ಚ ಹಸಿರಿನ ಕುದುರೆಮುಖ ಪರ್ವತ ಶ್ರೇಣಿಗಳ ನಡುವೆ ಕಂಡುಬರುವ ಜಲಪಾತ, ಶಿಖರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ, ಕುದುರೆಮುಖ ಚಾರಣ ಮಾಡುವುದು ಪ್ರವಾಸಿಗರ ಕನಸಾಗಿದ್ದು, ಅದಕ್ಕೆ ಈಗ ಅರಣ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ.
ಆನ್‌ಲೈನ್ ಮೂಲಕ ಬುಕ್ ಮಾಡಬೇಕು: ಕರ್ನಾಟಕದ ಅರಣ್ಯ ಇಲಾಖೆ ಈಗ ಚಾರಣ ನಡೆಸಲು ಆನ್‌ಲೈನ್ ಮೂಲಕ ಬುಕ್ ಮಾಡುವುದು ಕಡ್ಡಾಯಗೊಳಿಸಿದೆ. ಕುದುರೆಮುಖ ಚಾರಣಕ್ಕೂ ಸಹ ಪ್ರವಾಸಿಗರು ವೆಬ್‌ಸೈಟ್ https://aranyavihaara.karnataka.gov.in/ ಮೂಲಕ ಬುಕ್ ಮಾಡಬಹುದು.
ಬುಕಿಂಗ್‌ಗಳನ್ನು ಕನಿಷ್ಠ 2 ದಿನ ಮುಂಚಿತವಾಗಿ ಮಾಡತಕ್ಕದ್ದು. ಮುಂಗಡ ಬುಕಿಂಗ್‌ಗಳನ್ನು 30 ದಿನಗಳವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ ಎಂದು ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಬುಕ್ ಮಾಡುವಾಗ ಜಿಲ್ಲೆಯನ್ನು ಆಯ್ಕೆ ಮಾಡಿ, ಚಾರಣದ ಹೆಸರನ್ನು ಆಯ್ಕೆ ಮಾಡಬೇಕು. ದಿನಾಂಕವನ್ನು ನಮೂದು ಮಾಡಿ ಆ ದಿನಕ್ಕೆ ಚಾರಣ ಲಭ್ಯವಿದೆಯೇ? ಎಂದು ಪರಿಶೀಲಿಸಿ ಮುಂದುವರೆಯಬೇಕು.
ನಿಸರ್ಗದ ರೋಚಕ ಮತ್ತು ನಿಗೂಢತೆಯ ನಡುವೆ ಆಹ್ಲಾದಕರ ಮತ್ತು ಉಲ್ಲಾಸದಾಯಕ ಚಾರಣಗಳನ್ನು ಕೈಗೊಳ್ಳಲು ಹಾಗೂ ನೈಸರ್ಗಿಕ ಸೌಂದರ್ಯ ಮತ್ತು ಜೈವಿಕ ವೈವಿಧ್ಯತೆಯನ್ನು ಅನ್ವೇಷಿಸಲು ಚಾರಣಗಳು ಮತ್ತು ಪ್ರಕೃತಿ ಪಥಗಳು ಅವಕಾಶ ನೀಡುತ್ತದೆ. ಆದರೆ ಒಂದೇ ಸ್ಥಳದಲ್ಲಿ ನೂರಾರು ಪ್ರವಾಸಿಗರು ಒಟ್ಟಾಗಿ ಸೇರಿ ಜನಜಂಗುಳಿ ಆಗುವುದನ್ನು ತಡೆಯಲು ಈಗ ರಾಜ್ಯದಲ್ಲಿ ಚಾರಣಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯಗೊಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಸದಾ ಪ್ರವಾಸಿಗರನ್ನು ಕೈ ಬೀಸಿ ಕರೆಯತ್ತದೆ. ಜಿಲ್ಲೆಯಲ್ಲಿ ಹಲವು ಚಾರಣ ಪಥಗಳಿವೆ. ಆದರೆ ಕುದುರೆಮುಖ ಟ್ರಕ್ಕಿಂಗ್ ಬಹಳ ರೋಮಾಂಚನಕಾರಿಯಾಗಿದೆ. ವಾತಾವರಣ ಹಾಗೂ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತದೆ. ದಟ್ಟಕಾಡು ಮತ್ತು ಹುಲ್ಲುಗಾವಲು ಜೀವ ವೈವಿದ್ಯದ ತಾಣವಾಗಿದೆ.
ಇದು ಯುನೆಸ್ಕೋ ವಿಶ್ವಪರಂಪರೆಯ ತಾಣದಲ್ಲಿಯೂ ಸೇರ್ಪಡೆಗೊಂಡಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿದೆ. ಕುದುರೆಮುಖ ಟ್ರಕ್ಕಿಂಗ್ ಅನ್ನು ಸಹ ಈ ರಾಷ್ಟ್ರೀಯ ಉದ್ಯಾನವನದ ಒಳಗೆ ಕೈಗೊಳ್ಳಬೇಕಿದೆ. ಆದ್ದರಿಂದ ಅಕ್ರಮವಾಗಿ ಚಾರಣ ಕೈಗೊಂಡರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಚಾರಣ ಮಾಡಲು ನೋಂದಣಿ ಕಡ್ಡಾಯವಾಗಿದೆ.












Click it and Unblock the Notifications