ಚಿಕ್ಕಮಗಳೂರು ಬದ್ಲು ಮಂಗ್ಳೂರಿಗೆ ಟಿಕೆಟ್ ಕೊಟ್ಬಿಟ್ಟ KSRTC ಬಸ್ ಕಂಡಕ್ಟರ್: ಯಾವೋ ಇವೆಲ್ಲ: ಆಕ್ರೋಶ
ಚಿಕ್ಕಮಗಳೂರು, ಜೂನ್, 08: ಕಡೂರಿನಿಂದ ಚಿಕ್ಕಮಗಳೂರಿಗೆ ಹೊರಟ್ಟಿದ್ದ ಆಂಧ್ರ ಮೂಲದ ಪ್ರವಾಸಿಗರು ಕೆಎಸ್‌ಆರ್‌ಟಿಸಿ ಕಂಡಕ್ಟರ್ ಬಳಿ ಚಿಕ್ಕಮಗಳೂರಿಗೆ ಟಿಕೆಟ್ ಕೊಡಿ ಎಂದು ಕೇಳಿದರೆ ಅವರು ಮಂಗಳೂರಿಗೆ ದರದಲ್ಲಿ ಟಿಕೆಟ್ ಕೊಟ್ಟಿದ್ದಾರೆ. ಈ ವೇಳೆ ವಿಷಯ ತಿಳಯುತ್ತಿದ್ದಂತೆ ಬಸ್‌ನಲ್ಲಿದ್ದ ಇನ್ನುಳಿದ ಪ್ರಯಾಣಿಕರು ಬಸ್ ಕಂಡಕ್ಟರ್ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆಯೂ ನಡೆಯಿತು.
ಪ್ರವಾಸಕ್ಕೆ ಬಂದಿದ್ದ ಆಂಧ್ರ ಮೂಲದ ಪ್ರವಾಸಿಗರಿಗೆ ಚಿಕ್ಕಮಗಳೂರಿಗೆ ಟಿಕೆಟ್ ನೀಡುವ ಬದಲು ಮಂಗಳೂರಿಗೆ ಟಿಕೆಟ್ ನೀಡಿ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಎಡವಟ್ಟು ಮಾಡಿ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು 45 ರೂಪಾಯಿ ಟಿಕೆಟ್ ಬದಲು 202 ರೂಪಾಯಿ ಟಿಕೆಟ್ ನೀಡಿದ ಕಂಡಕ್ಟರ್ ಅವಾಂತರಕ್ಕೆ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಆಂಧ್ರದಿಂದ ರೈಲಿನ ಮೂಲಕ ಕಡೂರಿಗೆ ಬಂದಿದ್ದ ಆಂಧ್ರದ 18 ಜನ ಪ್ರವಾಸಿಗರು ಚಿಕ್ಕಮಗಳೂರಿನ ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ್ದರು. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಏರಿದ ಈ ಪ್ರಯಾಣಿಕರಿಗೆ ಕಂಡಕ್ಟರ್ ಚಿಕ್ಕಮಗಳೂರು ಬದಲು ಮಂಗಳೂರಿಗೆ ಟಿಕೆಟ್ ನೀಡಿದ್ದಾರೆ. ನಂತರ ಚಿಕ್ಕಮಗಳೂರಿಗೆ ಬಿಡುವುದಾಗಿ ಬಸ್ ಹತ್ತಿಸಿಕೊಂಡಿದ್ದಾರೆ.
ಕಂಡಕ್ಟರ್ ಒಂದು ಟಿಕೆಟ್‌ಗೆ 202ರಂತೆ 18 ಪ್ರಯಾಣಿಕರಿಗೆ 3,636 ರೂಪಾಯಿಯ ಟಿಕೆಟ್ ನೀಡಿದ್ದಾರೆ. ಆಗ ಕಡೂರಿನಿಂದ 40 ಕಿಲೋ ಮೀಟರ್ ದೂರದ ಚಿಕ್ಕಮಗಳೂರಿಗೆ 202 ರೂಪಾಯಿ ಏಕೆ ಎಂದು ಪ್ರವಾಸಿಗರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಪ್ರಯಾಣಿಕರು ಚಿಕ್ಕಮಗಳೂರಲ್ಲಿ ಇಳಿಯುತ್ತಿದ್ದಂತೆ ಕಂಡಕ್ಟರ್ ಅವರ ಬಳಿ ಟಿಕೆಟ್ ವಾಪಸ್ ಕೇಳಿದ್ದಾರೆ. ಇದರಿಂದ ಹೌಹಾರಿದ ಪ್ರಯಾಣಿಕರು ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications