Assembly election: ಮೂಡಿಗೆರೆ JDSನಲ್ಲೂ ಬಂಡಾಯದ ಹೊಗೆ, ಜೆಡಿಎಸ್ ಘೋಷಿತ ಅಭ್ಯರ್ಥಿ ವಿರುದ್ಧ ಕಾರ್ಯಕರ್ತರ ಆಕ್ರೋಶ
ಮೂಡಿಗೆರೆ, ಮಾರ್ಚ್, 21: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗುತ್ತಲೇ ಇದೆ. ಆದರೆ, ಜಿಲ್ಲೆಯ ಮೀಸಲು ಕ್ಷೇತ್ರವಾದ ಮೂಡಿಗೆರೆ ತಾಲೂಕಿನಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷದಲ್ಲೂ ಅಭ್ಯರ್ಥಿಗಳ ವಿರುದ್ಧ ಕಾರ್ಯಕರ್ತರು ಬಂಡಾಯ ಎದ್ದಿದ್ದಾರೆ.
ಬಿಜೆಪಿಯ ಹಾಲಿ ಶಾಸಕ ಹಾಗೂ ಈ ಬಾರಿಯೂ ಟಿಕೆಟ್ ಅಭ್ಯರ್ಥಿಯಾದ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಅವರ ಕಾರ್ಯಕರ್ತರೇ ಬೀದಿಗಿಳಿದ್ದರು. ಇನ್ನು ಕಾಂಗ್ರೆಸ್‌ನ ಅಭ್ಯರ್ಥಿ ನಯನ ಮೋಟಮ್ಮ ವಿರುದ್ಧವೂ ಕಾರ್ಯಕರ್ತರು ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ಬಹಿರಂಗ ಸಭೆ ಮಾಡಿದ್ದರು. ಇದೀಗ ಜೆಡಿಎಸ್ ಸರದಿ ಎಂಬಂತೆ ಮೂಡಿಗೆರೆಯ ಜೆಡಿಎಸ್ ಘೋಷಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ ವಿರುದ್ಧವೂ ಕಾರ್ಯಕರ್ತರು ಬಂಡಾಯ ಎದ್ದಿದ್ದಾರೆ.

ನಿಂಗಯ್ಯ ವಿರುದ್ಧ ಬಹಿರಂಗ ಸಭೆ
ಬಿ.ಬಿ.ನಿಂಗಯ್ಯ ವಿರುದ್ಧ ಬಹಿರಂಗ ಸಭೆ ನಡೆಸಿರುವ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಈ ಬಾರಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ಬಿ.ಬಿ. ನಿಂಗಯ್ಯ ವಿರೋಧಿ ಬಣದಿಂದ ಬಹಿರಂಗ ಸಭೆ ನಡೆದಿದ್ದು, ಸಭೆಯಲ್ಲಿ ಈ ಬಾರಿ ಬಿ.ಬಿ. ನಿಂಗಯ್ಯಗೆ ಟಿಕೆಟ್ ಕೊಡೊವುದು ಬೇಡವೇ ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ
ಬಿ.ಬಿ.ನಿಂಗಯ್ಯ ಅವರು ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿತ್ತು. ಆದರೂ ಕೂಡ ಮೊದಲ ಪಟ್ಟಿಯಲ್ಲೇ ಬಿ.ಬಿ. ನಿಂಗಯ್ಯ ಅವರ ಹೆಸರು ಸೇರಿಸಿದ್ದು ಸರಿಯಲ್ಲ. ನಿಂಗಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲ ನೀಡುತ್ತೇವೆ ಎಂದು ಆಗ್ರಹಿಸಿದ್ದಾರೆ.

5 ಹೋಬಳಿಗಳ ಕಡೆಗಣನೆ
ಹಿಂದಿನ ಚುನಾವಣೆಗಳಲ್ಲಿ ನಿಂಗಯ್ಯ ಅವರು ಗ್ರಾಮ ಗ್ರಾಮಗಳಿಗೆ ಹೋಗಲಿಲ್ಲ. ತಾಲೂಕಿನ ಪಂಚರತ್ನ ರಥಯಾತ್ರೆ ಬಂದ ಸಂದರ್ಭದಲ್ಲಿ 5 ಹೋಬಳಿಗಳನ್ನು ಕಡೆಗಣಿಸಲಾಗಿದೆ. ಆದ್ದರಿಂದ ನಿಂಗಯ್ಯ ಅವರಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ಟಿಕೆಟ್ ನೀಡಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲಿಲ್ಲ
ನಿಂಗಯ್ಯ ಶಾಸಕರಾಗಿದ್ದ ಸಂದರ್ಭದಲ್ಲಿ ಫಾರಂ ನಂಬರ್ 53ರ ದಾಖಲೆಗಳನ್ನು ಬಡವರ್ಗಕ್ಕೆ ಮಾಡಿಕೊಟ್ಟಿಲ್ಲ. ಪಕ್ಷದ ಕಾರ್ಯಕರ್ತರಿಗೆ ಆದ್ಯತೆಯನ್ನು ನೀಡಲಿಲ್ಲ. ಇದರ ಬಗ್ಗೆ ಕಾರ್ಯಕರ್ತರಿಗೆ ಬೇಸರವಿದೆ. ಹಿಂದಿನ ಚುನಾವಣೆಯಲ್ಲೂ ಅಭ್ಯರ್ಥಿಯಾಗಿದ್ದ ನಿಂಗಯ್ಯ ಚುನಾವಣೆಗೆ ಮೂರು ದಿನ ಇದ್ದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪಲಾಯನ ಮಾಡಿದ್ದರು. ಆದ್ದರಿಂದ ಈ ಬಾರಿ ಜೆಡಿಎಸ್ ಪಕ್ಷದಲ್ಲಿ ಅವರಿಗೆ ಟಿಕೆಟ್ ನೀಡಲು ವಿರೋಧ ಮಾಡುತ್ತಿದ್ದೇವೆ ಎಂದಿದ್ದಾರೆ.
ನಿಂಗಯ್ಯಗೆ ಪಕ್ಷದ ಕಾರ್ಯಕರ್ತರೊಂದಿಗೆ ನಿಕಟವಾದ ಸಂಪರ್ಕವಿಲ್ಲ. ಅವರು ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನೂ ಮಾಡಲಿಲ್ಲ. ನಿಂಗಯ್ಯಗೆ ಟಿಕೆಟ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.
ಮುಂದುವರೆದ ಕಾರ್ಯಕರ್ತರ ಸಮರ
ಒಟ್ಟಾರೆಯಾಗಿ ಮೂಡಿಗೆರೆಯಲ್ಲಿ ಮೂರು ಪಕ್ಷದಲ್ಲೂ ಕೂಡ ಒಂದಾಣಿಕೆ ಮನೋಭಾವವೇ ಕಾಣುತ್ತಿಲ್ಲ. ಬದಲಾಗಿ ಒಳಜಗಳಗಳು, ಕಚ್ಚಾಟಗಳು ಮುಂದುವರೆಯುತ್ತಲೇ ಇವೆ. ಸಾಮಾನ್ಯವಾಗಿ ರಾಜಕಾರಣಿಗಳು ಅಂದಮೇಲೆ ಜನರ ಸಮಸ್ಯೆಗಳನ್ನು ಆಲಿಸಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ರಾಜಕಾರಣಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾರಣ ಕಾರ್ಯಕರ್ತರೇ ಸ್ವಪಕ್ಷದ ನಾಯಕರ ವಿರುದ್ಧ ತಿರುಗಿಬಿದ್ದಾರೆ.
ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಗೆ ಕಾರಣವಾಗಬಹುದು ಎನ್ನಲಾಗಿದೆ. ಇದೇ ರೀತಿ ಮೂಡಿಗೆರೆ ಕ್ಷೇತ್ರದಲ್ಲಿ ಮೂರು ಪಕ್ಷದ ಕಾರ್ಯಕರ್ತರು ಹೊಸ ಮುಖಕ್ಕೆ ಟಿಕೆಟ್ ಕೊಡುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications