ಭೂಮಿ ವಿವಾದ: ಬಹಿಷ್ಕಾರ ಹಾಕಿ ಹೊಸ ಮನೆ ಕೆಡವಲು ಆಗ್ರಹ
ಚಿಕ್ಕಮಗಳೂರು, ಜನವರಿ 14: ಭೂಮಿ ವಿವಾದಕ್ಕೆ ಗ್ರಾಮಸ್ಥರು ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆ.ಬಿ.ಹಾಳ್ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಕೆ.ಬಿ.ಹಾಳ್ ಗ್ರಾಮದ ಮಂಜುನಾಥ್ ಕುಟುಂಬಕ್ಕೆ ಗ್ರಾಮಸ್ಥರೇ ಬಹಿಷ್ಕಾರ ಹಾಕಿದ್ದಾರೆ. ಈ ಮನೆ ಇರುವ ಜಾಗ ಪಕ್ಕದ ಶಾಲೆಗೆ ಸೇರಬೇಕು ಎನ್ನುವುದು ಗ್ರಾಮಸ್ಥರ ವಾದವಾಗಿದೆ. ಆದರೆ ಮಂಜುನಾಥ್ ಕುಟುಂಬ 77-78ನೇ ಇಸವಿಯಲ್ಲಿ ಊರಿಗೆ ಟ್ಯಾಂಕ್ ಕಟ್ಟಲು ನಾವೇ 50*50 ಜಾಗ ನೀಡಿದ್ದು. ದಾನದ ಪತ್ರ, ಚೆಕ್ಬಂಧಿ, ದಾಖಲೆ ಎಲ್ಲದರಲ್ಲೂ ಸರಿಯಾಗಿದೆ. 10 ಅಡಿ ಹೆಚ್ಚಾಗಿ ಬಿಟ್ಟು ನಮ್ಮ ಜಾಗದಲ್ಲಿ ನಾವು ಮನೆ ಕಟ್ಟಿಕೊಂಡಿದ್ದೇವೆ. ಆದರೂ, ಊರಿನ ಜನ ದ್ವೇಷದಿಂದ ನಮಗೆ ಮನೆ ಕಟ್ಟಲು ಬಿಡದೆ ಮನೆಗೆ ಹೋಗದಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮದ ಜನರ ಬಾಯಾರಿಕೆ ತಣಿಸಲು ಟ್ಯಾಂಕರ್ ಕಟ್ಟಲು ಸರ್ಕಾರಕ್ಕೆ ಭೂಮಿಯನ್ನು ದಾನ ನೀಡಿ ಮನೆ ಮುಂದಿನ ನೀರಿನ ನಲ್ಲಿಯನ್ನ ಅದೇ ಊರಿನ ಜನ ಮುರಿದು ಹಾಕಿದ್ದಾರೆ. ಪೂರ್ವಕ್ಕೆ ಸ್ಕೂಲ್ ಬೌಂಡರಿ, ಪಶ್ಚಿಮಕ್ಕೆ ವೆಂಕಟರಾಮಯ್ಯನವರ ಜಾಗ, ಉತ್ತರಕ್ಕೆ ಸೊಸೈಟಿ ಜಾಗ, ದಕ್ಷಿಣಕ್ಕೆ ದಾನದ ಒಂದು ಭಾಗ ಎಂದು ದಾಖಲೆ ಕೂಡ ಇದೆ. ಆದರೂ ಊರಿನ ಗ್ರಾಮಸ್ಥರು ದ್ವೇಷದಿಂದ ನಮ್ಮ ಜಾಗವನ್ನ ಊರಿನ ಜಾಗವೆಂದು ಕಟ್ಟಿದ ಮನೆಯನ್ನು ಬೀಳಿಸಲು ಮುಂದಾಗಿದ್ದಾರೆ ಎಂದು ಮಂಜುನಾಥ್ ಅವರ ಕುಟುಂಬ ಆರೋಪಿಸಿದೆ.

ನಮ್ಮ ಬಳಿ ಎಲ್ಲಾ ದಾಖಲೆ ಇದೆ. ಸರ್ವೇ ಮಾಡುವಾಗ ಅಧಿಕಾರಿಗಳು ಎಡವಟ್ಟಿಗೆ ನಾವೇಕೆ ನಮ್ಮ ಜಾಗವನ್ನು ಬಿಡಬೇಕು. ಹೊಟ್ಟೆ-ಬಟ್ಟೆ ಕಟ್ಟಿ 30 ಲಕ್ಷ ಖರ್ಚು ಮಾಡಿ ಮನೆ ಕಟ್ಟಿದ್ದೇವೆ. ಈಗ ಎಲ್ಲಾ ದಾಖಲೆ ಇರುವ ಮನೆಯನ್ನು ಬೀಳಿಸುವುದು ಎಷ್ಟು ಸರಿ ಎಂದು ನೊಂದ ಕುಟುಂಬ ಪ್ರಶ್ನಿಸಿದೆ. ನಮ್ಮ ಊರಿನ ಜನರೇ ನಮ್ಮ ಪಕ್ಷದಲ್ಲಿ ಇದ್ದವರೇ ನಾವು ಬಿಜೆಪಿಯನ್ನು ಬಿಟ್ಟು ಹೋಗಲಿ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರ ಗಲಾಟೆಗೆ ಮಂಜುನಾಥ್ ಸಂಬಂಧಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ರಾಜಕೀಯವೂ ಒಂದಷ್ಟು ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಯಾಕೆಂದರೆ ಮನೆ ಮಾಲೀಕ ಮಂಜುನಾಥ್ ಮಗಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದಾರೆ. ಮನೆ ಮಾಲೀಕರು ದಾನ ನೀಡಿರುವುದು 1977ನೇ ಇಸವಿಯಲ್ಲಿ. ಆಗ ಇವರ್ಯಾರು ಹುಟ್ಟೇ ಇರಲಿಲ್ಲ. ಈಗ ಹಾರಾಡುತ್ತಾರೆ. ನಮ್ಮ ದಾಖಲೆ ತೋರಿಸುತ್ತೇವೆ. ಶಾಲೆ ಜಾಗ ಅಂತ ಅವರು ದಾಖಲೆ ತೋರಿಸಲಿ ಎನ್ನುವುದು ಮಂಜುನಾಥ್ ಕುಟುಂಬಸ್ಥರ ವಾದವಾಗಿದೆ. ಸದ್ಯ ಸರ್ಕಾರ ಹಾಗೂ ಅಧಿಕಾರಿಗಳು ಕೂಲಂಕುಶವಾಗಿ ಸ್ಥಳ ಪರಿಶೀಲನೆ ನಡೆಸಿ ಜಾಗ ಯಾರಿಗೆ ಸೇರಬೇಕು ಅವರಿಗೆ ನೀಡಬೇಕಾಗಿದೆ.












Click it and Unblock the Notifications