ತರೀಕೆರೆ ತಾಲ್ಲೂಕಿನ ಹಳಿಯೂರಿನಲ್ಲಿ ಬದುಕಿದ್ದಾಗಲೇ ತನ್ನ ತಿಥಿಗೆ ಅಧಿಕಾರಿಗಳನ್ನು ಆಹ್ವಾನಿಸಿದ ರೈತ
ತರೀಕೆರೆ, ಫೆಬ್ರವರಿ 9: ಸಾಮಾನ್ಯವಾಗಿ ಸಾವನ್ನಪ್ಪಿದ ಕೆಲ ದಿನಗಳ ಬಳಿಕ ತಿಥಿಗೆ ಆಹ್ವಾನ ನೀಡುತ್ತಾರೆ. ಆದರೆ, ಇದೀಗ ರೈತರೊಬ್ಬರು ಬದುಕಿದ್ದಾಗಲೇ ಈ ಕೆಲಸ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. ಹಾಗಾದ್ರೆ ಈ ಅನ್ನದಾತ ಹೀಗೆ ಮಾಡಲು ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಶ್ರೀಗಂಧ ಬೆಳೆಗಾರರೊಬ್ಬರು ಸರ್ಕಾರಿ ವ್ಯವಸ್ಥೆಯ ವಿರುದ್ಧ ಗಮನ ಸೆಳೆಯುವ ರೀತಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಕಚೇರಿಗಳಿಗೆ ಅಲೆದಾಡಿ ಬೇಸತ್ತಿದ್ದ ರೈತ, ಈಗ ಬದುಕಿದ್ದಾಗಲೇ ತನ್ನ ಅಂತ್ಯಸಂಸ್ಕಾರ ಹಾಗೂ ತಿಥಿ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಆಹ್ವಾನಿಸುವ ಮೂಲಕ ವ್ಯವಸ್ಥೆಯ ಅಸಡ್ಡೆಯನ್ನು ಪ್ರಶ್ನೆ ಮಾಡಿದ್ದಾರೆ.

ಅತೀ ಕಡಿಮೆ ದರ ನಿಗದಿ: ರೈತ ವಿಷುಕುಮಾರ್ ಅವರ ಫಲವತ್ತಾದ ಕೃಷಿಭೂಮಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸ್ವಾಧೀನವಾಗಿದ್ದು, ಜಮೀನಿನಲ್ಲಿದ್ದ ಮೌಲ್ಯಯುತ ಶ್ರೀಗಂಧದ ಮರಗಳಿಗೆ ಸಮರ್ಪಕ ಪರಿಹಾರ ದೊರೆಯದಿರುವುದು ಈ ಹೋರಾಟಕ್ಕೆ ಕಾರಣವಾಗಿದೆ. ಅವರ ಪ್ರಕಾರ, ಇತರ ಮರಗಳಿಗೆ ಸಾವಿರಾರು ರೂಪಾಯಿ ಪರಿಹಾರ ನೀಡಿರುವ ಅಧಿಕಾರಿಗಳು, ದುಬಾರಿ ಮೌಲ್ಯದ ಶ್ರೀಗಂಧದ ಮರಕ್ಕೆ ಮಾತ್ರ ಅತೀ ಕಡಿಮೆ ದರ ನಿಗದಿಪಡಿಸಿದ್ದಾರೆ ಎಂದು ಆರೋಪ ಮಾಡಿ ಆಕ್ರೊಶ ಹೊರಹಾಕಿದ್ದಾರೆ.
ನ್ಯಾಯಕ್ಕಾಗಿ ಕಚೇರಿಗಳಿಗೆ ಅಲೆದಾಟ: ನ್ಯಾಯಾಲಯವು ಒಂದು ಮರಕ್ಕೆ ಕನಿಷ್ಠ ವೈಜ್ಞಾನಿಕವಾಗಿ ನಿರ್ಧರಿಸಿದ ಮೊತ್ತವನ್ನು ನೀಡಬೇಕು ಎಂದು ಸೂಚನೆ ನೀಡಿದೆ. ಆದರೂ, ಸ್ಥಳೀಯ ಅಧಿಕಾರಿಗಳು ಅದನ್ನು ಅನುಷ್ಠಾನಗೊಳಿಸಿಲ್ಲ ಎಂದು ವಿಷುಕುಮಾರ್ ಆರೋಪಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ನ್ಯಾಯಕ್ಕಾಗಿ ಕಚೇರಿಗಳ ನಡುವೆ ಅಲೆದರೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಅತೀ ಕಡಿಮೆ ದರ ಸಿಕ್ಕ ಹಿನ್ನೆಲೆ ಫೆಬ್ರವರಿ 9ರಂದು ಬೆಳಗ್ಗೆ ಸಂತಾಪ ಸಭೆ ಹಾಗೂ ಮಧ್ಯಾಹ್ನ ತಿಥಿ ಊಟವನ್ನು ಆಯೋಜಿಸಿ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಆಹ್ವಾನ ಪತ್ರ ಕಳುಹಿಸುವ ಮೂಲಕ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆಯ ಉದ್ದೇಶವಲ್ಲ, ಆದರೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತೀವ್ರ ಎಚ್ಚರಿಕೆ ನೀಡುವ ಸಂಕೇತ ಎಂದು ರೈತ ತಿಳಿಸಿದ್ದಾರೆ. ರೈತನ ಈ ವಿಭಿನ್ನ ಹೋರಾಟ ಇದೀಗ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಅಧಿಕಾರಿಗಳು ಕೂಡಲೇ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.












Click it and Unblock the Notifications