ಹುಬ್ಬಳ್ಳಿ ಹಿಂಸಾಚಾರ: ದುಷ್ಕರ್ಮಿಗಳಿಂದಲೇ ನಷ್ಟದ ಹಣ ವಸೂಲಿಗೆ ಸರಕಾರ ಚಿಂತನೆ
ಚಿಕ್ಕಮಗಳೂರು, ಏ. 19: ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆಗಳಲ್ಲಿ ಭಾಗಿಯಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬೊಮ್ಮಾಯಿ, ಕಾನೂನು ಕೈಗೆತ್ತಿಕೊಂಡು ದುಷ್ಕೃತ್ಯ ಎಸಗಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಇವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರ ಘಟನೆಯಲ್ಲಿ ಸಂಭವಿಸಿದ ಹಾನಿಯ ಮೊತ್ತವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಹುಬ್ಬಳ್ಳಿ ಹಿಂಸಾಚಾರ ನಡೆಸಿದ ಪುಂಡರಿಂದಲೇ ಹಣ ವಸೂಲಿ ಮಾಡಲು ಸರಕಾರ ಯೋಜಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕೋಮುಗಲಭೆ ಪ್ರಕರಣದಲ್ಲಿ ಉತ್ತರ ಪ್ರದೇಶ ಸರಕಾರ ಕ್ರಮ ಕೈಗೊಳ್ಳುವ ಮಾದರಿಯನ್ನ ಕರ್ನಾಟಕವೂ ಅನುಸರಿಸುತ್ತಿದೆಯಾ ಎಂಬ ಪ್ರಶ್ನೆಗೆ ಸಿಎಂ ಬೊಮ್ಮಾಯಿ, ಉ.ಪ್ರ.ದಲ್ಲಿ ಕೋಮುಗಲಭೆಯ ಪರಿಸ್ಥಿತಿಗೆ ಅನುಗುಣವಾಗಿ ಅಲ್ಲಿನ ಸರಕಾರ ಕಠಿಣ ಕ್ರಮ ಕೈಗೊಂಡಿತು. ನಾವು ಇಲ್ಲಿಯ ಸ್ಥಿತಿ ನೋಡಿಕೊಂಡು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಅಮಾಯಕರ ಬಂಧನ ಇಲ್ಲ:
ಹುಬ್ಬಳ್ಳಿ ಹಿಂಸಾಚಾರ ಘಟನೆಯಲ್ಲಿ ಒಂದೇ ಸಮುದಾಯದ ಜನರನ್ನು ಟಾರ್ಗೆಟ್ ಮಾಡಿ ಬಂಧಿಸಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಸಿಎಂ ಬೊಮ್ಮಾಯಿ ತಳ್ಳಿಹಾಕಿದ್ದಾರೆ. "ಸಾಕ್ಷ್ಯಾಧಾರಗಳ ಮೇಲೆ ವ್ಯಕ್ತಿಗಳನ್ನ ಬಂಧಿಸಲಾಗಿದೆ. ಅಯಾಯಕರನ್ನ ಅರೆಸ್ಟ್ ಮಾಡಲಾಗಿಲ್ಲ" ಎಂದು ಹೇಳಿದ ಅವರು ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ರಾಮ ರಾಜ್ಯವಲ್ಲ, ರಾವಣ ರಾಜ್ಯ ಇದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ವಿಪಕ್ಷದಿಂದ ಉತ್ತಮವಾದುದನ್ನು ನಿರೀಕ್ಷಿಸಲು ಆಗುವುದಿಲ್ಲ. ನಮಗೆ ಜನರು ಏನು ಹೇಳುತ್ತಾರೆ ಎಂಬುದು ಮುಖ್ಯ ಎಂದು ಕುಟುಕಿದ್ದಾರೆ.

ಏನಿದು ಹುಬ್ಬಳ್ಳಿ ಗಲಭೆ?:
ಹಳೆ ಹುಬ್ಬಳ್ಳಿಯ ಮಸೀದಿಯೊಂದರ ಮೇಲೆ ಭಗವಾಧ್ವಜ ಹಾರಿಸಲಾಗಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗಿತ್ತು. ಅದನ್ನು ಆಕ್ಷೇಪಿಸಿ ದೂರು ಕೊಡಲಾಗಿತ್ತು. ಪೊಲೀಸರು ಒಬ್ಬ ವ್ಯಕ್ತಿಯನ್ನ ಬಂಧಿಸಿದ್ದರು. ಇಷ್ಟಕ್ಕೆ ತೃಪ್ತರಾಗದ ಸಮುದಾಯದ ಜನರು ಶನಿವಾರ ಸಂಜೆ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು. ಪೊಲೀಸರು ಆಶ್ವಾಸನೆ ನೀಡಿ ಅವರನ್ನ ವಾಪಸ್ ಕಳುಹಿಸಿದರು. ಆದರೆ, ಅಂದು ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಜನರು ಮತ್ತು ಸೇರಿದರು. ಅವರ ಮುಖಂಡರನ್ನು ಕರೆಸಿ ಮಾತನಾಡಲು ಪೊಲೀಸರು ಮಾಡಿದ ಪ್ರಯತ್ನ ವಿಫಲವಾಯಿತು. ಉದ್ರಿಕ್ತ ಜನರು ಹಿಂಸಾಚಾರದಲ್ಲಿ ತೊಡಗಿದರು. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದರು. ಕಲ್ಲು ತೂರಾಟ ಮಾಡಿ ಹಾನಿ ಮಾಡಿದರು. ದೇವಸ್ಥಾನ, ಆಸ್ಪತ್ರೆಯನ್ನೂ ದುಷ್ಕರ್ಮಿಗಳು ಬಿಡಲಿಲ್ಲ ಎನ್ನಲಾಗಿದೆ.

89 ಮಂದಿ ಬಂಧನ:
ಈ ಘಟನೆ ಸಂಬಂಧ ಪೊಲೀಸರು ಈವರೆಗೆ 89 ಮಂದಿಯನ್ನ ಬಂಧಿಸಿದ್ದಾರೆ. ಅಂದಿನ ಘಟನೆಯಲ್ಲಿ ಹಲವು ಪೊಲೀಸರಿಗೆ ಗಾಯವಾಗಿದೆ. ಒಬ್ಬ ಅಧಿಕಾರಿಯ ಸ್ಥಿತಿ ಗಂಭೀರವಾಗಿರುವುದು ತಿಳಿದುಬಂದಿದೆ.
ಡಿಜೆ ಹಳ್ಳಿ ಮಾದರಿಯಲ್ಲಿ ಹಿಂಸಾಚಾರ:
ಬೆಂಗಳೂರಿನ ಡಿಜೆ ಹಳ್ಳಿಯಲ್ಲೂ 2020ರಲ್ಲಿ ಇದೇ ಮಾದರಿಯಲ್ಲಿ ಹಿಂಸಾಚಾರ ನಡೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ವಿರುದ್ಧ ಉದ್ರಿಕ್ತಗೊಂಡ ಜನರ ಗುಂಪು ಹಿಂಸಾಚಾರದಲ್ಲಿ ತೊಡಗಿ ಪೊಲೀಸ್ ಠಾಣೆಯನ್ನ ಧ್ವಂಸಗೊಳಿಸಿತ್ತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನೂ ಸುಟ್ಟುಹಾಕಿತು. ರಸ್ತೆಯಲ್ಲಿದ್ದ ಅನೇಕ ಸಾರ್ವಜನಿಕರ ವಾಹನ ಮತ್ತು ಆಸ್ತಿಪಾಸ್ತಿಗಳ ಮೇಲೆ ಉದ್ರಿಕ್ತರು ದಾಳಿ ಮಾಡಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬೆಂಗಳೂರಿನ ಡಿಜೆ ಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೂ ಇರುವ ಸಾಮ್ಯತೆಯನ್ನ ಎತ್ತಿತೋರಿಸಿದ್ದಾರೆ. ಹುಬ್ಬಳ್ಳಿ ಘಟನೆಯು ಪೂರ್ವನಿಯೋಜಿತ ಕೃತ್ಯ ಎಂದು ಆರೋಪ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಕೂಡ ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸುವುದು ವ್ಯವಸ್ಥಿತ ಅಪರಾಧವೇ ಆಗಿರುತ್ತದೆ ಎಂದು ಒತ್ತಿಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications