ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಯಥಾಸ್ಥಿತಿ ಮುಂದುವರಿಕೆಗೆ ಹೈಕೋರ್ಟ್ ಆದೇಶ
ಬೆಂಗಳೂರು ಅ.11. ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯ ವಿವಾದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಮುಂದುವರಿಸಿದೆ.
ಹಾಗಾಗಿ ಸದ್ಯ ಈ ಹಿಂದೆ ಇದ್ದಂತೆಯೇ ಪೂಜಾ ವಿಧಿ ವಿಧಾನಗಳು ಮುಂದುವರಿಯಲಿದೆ. ನ್ಯಾಯಾಲಯ ಕಳೆದ ಆ.22ರಂದು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ.
ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿಗೆ ಮುಜಾವರ್ ಹಾಗೂ ಅರ್ಚಕರಿಂದ ಪೂಜಾವಿಧಿಗೆ ಅವಕಾಶ ಕಲ್ಪಿಸಲು ಸಂಪುಟದ ನಿರ್ಧಾರ ಹೈಕೋರ್ಟ್ ಗೆ ಸಲ್ಲಿಕೆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ಆಕ್ಷೇಪಣೆ ಎತ್ತಿದ್ದಾರೆ.
ಅರ್ಜಿದಾರರ ಆಕ್ಷೇಪಣೆ ಪ್ರತಿ ಸರ್ಕಾರಿ ವಕೀಲರಿಗೆ ನೀಡಲು ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆ 3 ವಾರ ಮುಂದೂಡಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರಿಸಲು ಸೂಚನೆ ನೀಡಿದೆ.

ಈ ಮಧ್ಯೆ ಸರ್ಕಾರ ಕಳೆದ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮೆಮೋ ಸಲ್ಲಿಸಿ, ದತ್ತ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಧರ್ಮಗಳ ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನ ನೆರವೇರಿಸಲು ಅವಕಾಶ ಕಲ್ಪಿಸಲು ಕೈಗೊಂಡಿರುವ ನಿರ್ಣಯದ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸರ್ಕಾರಿ ವಕೀಲರ ಮೆಮೋ ಪರಿಗಣಿಸಿದ ನ್ಯಾಯಪೀಠ, ಸರ್ಕಾರವು ಅದರ ಪ್ರತಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು. ಸರ್ಕಾರದ ನಿರ್ಧಾರಕ್ಕೆ ಅರ್ಜಿದಾರರಿಗೆ ಯಾವುದಾದರೂ ಆಕ್ಷೇಪಣೆಯಿದ್ದರೆ ಸಲ್ಲಿಸಬಹುದು ಎಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಅಲ್ಲದೆ, ಸಮಿತಿಯ ನಿರ್ಣಯವು ಈ ಮೇಲ್ಮನವಿ ಕುರಿತ ವಿಭಾಗೀಯ ಪೀಠದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಒಂದೊಮ್ಮೆ ಈ ಅವಧಿಯಲ್ಲಿ ಸರ್ಕಾರವು ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಾನದಲ್ಲಿ ಯಾವುದೇ ಮಾರ್ಪಾಡು ಮಾಡಿದರೆ, ಆ ಕುರಿತು ಪ್ರಶ್ನಿಸಿ ಸೂಕ್ತ ಅರ್ಜಿ ಸಲ್ಲಿಸಲು ಪಕ್ಷಗಾರರಿಗೆ ಅವಕಾಶವಿದೆ ಎಂದು ತಿಳಿಸಿ 2022ರ ಮೇ 31ರಂದು ಹೊರಡಿಸಿರುವ ಆದೇಶವು ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿತ್ತು.

ವರದಿ ಅನುಮೋದನೆ: ಸರ್ಕಾರಿ ವಕೀಲರು ಮೆಮೋ ಸಲ್ಲಿಸಿ, 2021ರ ಸೆ.28ರ ಹೈಕೋರ್ಟ್ ಏಕಸದಸ್ಯಪೀಠದ ಆದೇಶದಂತೆ ಸರ್ಕಾರ ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯನ್ನು ಪ್ರಕರಣವನ್ನು ಮರು ಪರಿಶೀಲನೆ ನಡೆಸಿ 2022ರ ಜೂ.30ರಂದು ವರದಿ ಸಲ್ಲಿಸಿತ್ತು. ವರದಿಯಲ್ಲಿ 10 ಶಿಫಾರಸು ಮಾಡಲಾಗಿದ್ದು, ಅದನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಹೇಳಿದ್ದರು.
ಅಲ್ಲದೆ, ಸಚಿವ ಸಂಪುಟ ಉಪ ಸಮಿತಿಯ ವರದಿ ಆಧರಿಸಿ ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜು.1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022 ಜು.19ರಂದು ಆದೇಶಿಸಲಾಗಿದೆ. ಹಾಗೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆ.13ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಪ್ರಕರಣದ ಹಿನ್ನೆಲೆ: ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ 2018ರಲ್ಲಿ ಆದೇಶಿಸಿತ್ತು. ಅದನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯಪೀಠ, ಪ್ರಕರಣವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಹಾಗೆಯೇ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆ.28ರಂದು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿದ್ದೀನ್ ಮೇಲ್ಮನವಿ ಸಲ್ಲಿಸಿದ್ದಾರೆ.












Click it and Unblock the Notifications