ಚಿಕ್ಕಮಗಳೂರು ರೈತನಿಗೆ 3 ಲಕ್ಷ ರೂಪಾಯಿ ವಿದ್ಯುತ್ ಬಿಲ್: ಆಗಿದ್ದೇನು?
ಚಿಕ್ಕಮಗಳೂರು, ಫೆಬ್ರವರಿ 26: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ಯೋಜನೆಗಳು ಯಶಸ್ವಿಯಾಗಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆ ಯಶಸ್ವಿಗಾಗಿ ಮುಂದುವರಿದಿದ್ದು, ಇದರಿಂದ ಜನರಿಗೆ ಆರ್ಥಿಕವಾಗಿ ಸಹಾಯವಾಗುತ್ತಿರುವುದಂತೂ ಸತ್ಯ. ಆದರೆ ಸರ್ಕಾರ ನೀಡುವ ಉಚಿತ ಯೋಜನೆಗಳು ಆಯಾ ಇಲಾಖೆಗೆ ಹೊರೆಯಾಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಉದಾಹರಣೆ ಗೃಹ ಜ್ಯೋತಿ ಯೋಜನೆ ಮೆಸ್ಕಾಂಗಳಿಗೆ ಹೊರೆಯಾಗಿ ಇತರ ಮಾರ್ಗಗಗಳಿಂದ ಹಣ ಸಂಗ್ರಹಕ್ಕೆ ಮುಂದಾಗುತ್ತಿದೆಯಾ ಎನ್ನುವ ಅನುಮಾನ ಮೂಡಿದೆ.
ಜನರಿಗೆ ಈ ಅನುಮಾನ ಮೂಡಲು ಕಾರಣ ಕೂಡ ಇದೆ. ಚಿಕ್ಕಮಗಳೂರು ರೈತರೊಬ್ಬರಿಗೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ಉಮೇಶ್ ಎನ್ನುವವರು ಕಾಫಿ ಬೆಳೆಗಾರರಾಗಿದ್ದಾರೆ. ಜೊತೆಗೆ ಇತರ ಕೃಷಿ ಮಾಡಿಕೊಂಡಿದ್ದಾರೆ. ಇದೀಗ ರೈತ ಉಮೇಶ್ ತಮಗೆ ಬಂದ ವಿದ್ಯುತ್ ಬಿಲ್ ನೋಡಿ ಹೌಹಾರಿದ್ದಾರೆ.

ಹೌದು ಸುಮಾರು 13 ವರ್ಷ 4 ತಿಂಗಳ ಬಳಿಕ ಬಂದ ವಿದ್ಯುತ್ ಬಿಲ್ ಇದಾಗಿದ್ದು, 10 ಎಚ್ಪಿ ಮೋಟರ್ ಬಳಕೆಗೆ ಬರೋಬ್ಬರಿ 3,20,076 ರೂಪಾಯಿ ಬಿಲ್ ಬಂದಿದೆ. ರೈತರಿಗೆ ಕೃಷಿಗಾಗಿ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಬಂಗಾರಪ್ಪ ಸಿಎಂ ಆಗಿದ್ದ ಕಾಲದಿಂದಲೂ ರೈತರಿಗೆ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ ಆದರೆ ಇದೀಗ ರೈತ ಉಮೇಶ್‌ಗೆ 13 ವರ್ಷಗಳ ಬಿಲ್ ಅನ್ನು ಒಂದೇ ಬಾರಿಗೆ ನೀಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೆಸ್ಕಾಂ ಉಪ ವಿಭಾಗದಿಂದ ರೈತ ಉಮೇಶ್‌ಗೆ ನೋಟಿಸ್ ನೀಡಲಾಗಿದ್ದು, ಬಿಲ್ ನೀಡಿದ 15 ದಿನಗಳ ಒಳಗೆ ಹಣ ಪಾವತಿ ಮಾಡಬೇಕು ಇಲ್ಲದೇ ಹೋದರೆ ವಿದ್ಯುತ್ ಕಡಿತ ಮಾಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ರೈತರಿಗೆ 10 ಎಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತದ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಕಾಫಿ ಬೆಳೆಗಾರರಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ರೈತ ಉಮೇಶ್ ಇನ್ನಷ್ಟು ಕಂಗಾಲಾಗಿದ್ದು, ಏಕಾಏಕಿ ಮೂರು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡುವುದು ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರೈತನ ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಆಗ್ರಹ ಜೋರಾಗಿ ಕೇಳಿ ಬರುತ್ತಿದೆ.












Click it and Unblock the Notifications