ಮನೆಯಲ್ಲೇ ಚೆಕ್ ವಿತರಿಸುತ್ತಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ಮೂಡಿಗೆರೆ, ಮಾರ್ಚ್, 30: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ಹಿನ್ನೆಲೆ ಬುಧವಾರ (ಮಾರ್ಚ್ 29)ರಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಆದರೂ ಕೂಡ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಮನೆಯಲ್ಲೇ ಚೆಕ್ ವಿತರಣೆ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಘನೆ ಮಾಡಿದ್ದು, ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಮೂಡಿಗೆರೆ ಶಾಸಕಸರ ವಿರುದ್ಧ ದೂರು ದಾಖಲು
ಚುನಾವಣಾ ನೀತಿ ಸಂಹಿತೆ ಉಲ್ಲಂಘಿನೆ ಹಿನ್ನೆಲೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಎಂ.ಪಿ.ಕುಮಾರಸ್ವಾಮಿ ವಿರುದ್ಧ ತಾಲೂಕು ಚುನಾವಣಾ ಅಧಿಕಾರಿ ಪಿ.ರಾಜೇಶ್ ದೂರು ದಾಖಲಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಎಂ.ಪಿ.ಕುಮಾರಸ್ವಾಮಿಯವರು ಜನರಿಗೆ ಚೆಕ್ ವಿತರಣೆ ಮಾಡಿದ್ದಾರೆ. ಆಗ ದಿಢೀರ್ ಭೇಟಿ ಕೊಟ್ಟ ಚುನಾವಣಾ ಅಧಿಕಾರಿಗಳು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಮೂಡಿಗೆರೆ ಪೊಲೀಸರು ನೀತಿ ಸಂಹಿತೆ ಉಲ್ಲಂಘನೆಯಡಿ ಶಾಸಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್.ಎಸ್, ಎ.ಎಸ್.ಎಂ ವಿರುದ್ಧ ದೂರು ದಾಖಲು
ಹೀಗೆ ರಾಜ್ಯ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉಡುಗೊರೆಗಳನ್ನು ಹಂಚುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಇದೇ ರೀತಿ ದಾವಣಗೆರೆಯಲ್ಲೂ ಕೂಡ ಶಾಮನೂರು ಶಿವಶಂಕರಪ್ಪ, ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿರುವ ಉಡುಗೊರೆ ಬಾಕ್ಸ್‌ಗಳು ಪತ್ತೆಯಾಗಿದ್ದು, ಪ್ರಕರಣ ಸಂಬಂಧ ತಂದೆ, ಮಗ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಅಕ್ರಮವಾಗಿ ಅಡುಗೆ ಉಪಕರಣ ಹಂಚಿದ ಆರೋಪದ ಮೇಲೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಶಾಮನೂರು ಶಿವಶಂಕರಪ್ಪ ಮೊದಲ ಆರೋಪಿಯಾದರೆ, ಇವರ ಮಗ ಎಸ್.ಎಸ್. ಮಲ್ಲಿಕಾರ್ಜುನ್ 2ನೇ ಆರೋಪಿ ಆಗಿದ್ದಾರೆ. ಅಕ್ರಮವಾಗಿ ಕುಕ್ಕರ್, ಸೀರೆ, ಅಡುಗೆ ಉಪಕರಣಗಳು ಇದ್ದ ಬಾಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೇಲೆ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರವಿರುವುದು ಕಂಡುಬಂದಿದೆ. ಇದೇ ಕಾರಣದಿಂದ ತಂದೆ, ಮಗ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ, ಮಲ್ಲಿಕಾರ್ಜುನ್ ಭಾವಚಿತ್ರವಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಗಳು ಪತ್ತೆ ಆಗಿವೆ. ದಾವಣಗೆರೆ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಸಿಂಗ್ ನಗರದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಯನ್ನು ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿದ್ದ ಅಡುಗೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾಡಜ್ಜಿ ಹನಮಂತಪ್ಪ ಎಂಬುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣದಲ್ಲಿ ಶಾಮನೂರು ಶಿವಶಂಕರಪ್ಪ ಎ1 ಹಾಗೂ ಮಲ್ಲಿಕಾರ್ಜುನ್ ಎ2 ಆರೋಪಿ ಆಗಿದ್ದಾರೆ.












Click it and Unblock the Notifications