ಚಾರ್ಮುಡಿ ಘಾಟಿ ಅರಣ್ಯದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಪಶ್ಚಿಮ ಘಟ್ಟ ಪ್ರದೇಶ
ಕೊಟ್ಟಿಗೆಹಾರ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಚಾರ್ಮಾಡಿ ಘಾಟಿ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಸಂಭವಿಸಿದೆ. ಈ ಅಗ್ನಿ ಅವಘಡದಿಂದಾಗಿ ಪಶ್ಚಿಮ ಘಟ್ಟಗಳ ಸಾಲಿನ ಅಪಾರ ವನಸಂಪತ್ತು ಬೆಂಕಿಗೆ ಆಹುತಿಯಾಗುದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ, ಕಳೆದ ಕೆಲವು ದಿನಗಳಿಂದ ಬಿಸಿಲ ತಾಪ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಪ್ರದೇಶಗಳು (ಶೋಲಾ ಕಾಡುಗಳು) ಸಂಪೂರ್ಣವಾಗಿ ಧಗಧಗಿಸಿ ಉರಿಯುತ್ತಿವೆ. ಘಟ್ಟ ಪ್ರದೇಶದಲ್ಲಿ ಗಾಳಿಯ ವೇಗ ತೀವ್ರವಾಗಿರುವುದರಿಂದ ಬೆಂಕಿ ಕ್ಷಿಪ್ರವಾಗಿ ಅರಣ್ಯದ ಒಳಭಾಗಕ್ಕೆ ವ್ಯಾಪಿಸುತ್ತಿದೆ. ಒಣಗಿದ ಹುಲ್ಲು ಹಾಗೂ ಗಿಡಗಂಟಿಗಳಿಗೆ ಹೊತ್ತಿಕೊಂಡ ಜ್ವಾಲೆಯು ದೈತ್ಯಾಕಾರವಾಗಿ ಬೆಳೆದಿದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ.

ವಾಹನ ಸವಾರರಲ್ಲಿ ಆತಂಕ
ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಚಾರ್ಮಾಡಿ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರು ತೀವ್ರ ಆತಂಕಕ್ಕೀಡಾಗಿದ್ದಾರೆ. ಬೆಂಕಿಯ ತೀವ್ರತೆಗೆ ರಸ್ತೆಯುದ್ದಕ್ಕೂ ದಟ್ಟವಾದ ಹೊಗೆ ಆವರಿಸಿಕೊಂಡಿದ್ದು, ವಾಹನ ಚಲಾಯಿಸುವುದು ಸವಾಲಾಗಿದೆ. ಅರಣ್ಯದಂಚಿನಿಂದ ರಸ್ತೆಗೆ ಬೆಂಕಿ ಹಬ್ಬುವ ಭೀತಿಯೂ ಎದುರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಕಿಡಿಗೇಡಿಗಳ ಕೃತ್ಯದ ಶಂಕೆ
ಇದು ನೈಸರ್ಗಿಕವಾಗಿ ಉಂಟಾದ ಬೆಂಕಿಯಲ್ಲ, ಬದಲಾಗಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಎಸಗಿರುವ ಕೃತ್ಯವಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು ಉರಿಯುವ ಸಿಗರೇಟ್ ಅಥವಾ ಬೀಡಿ ತುಂಡುಗಳನ್ನು ಅರಣ್ಯದಂಚಿನಲ್ಲಿ ಎಸೆದಿರುವ ಸಾಧ್ಯತೆಯಿದೆ. ಸ್ಥಳೀಯ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ
ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಬೆಂಕಿ ಬಿದ್ದಿರುವ ಪ್ರದೇಶವು ಕಡಿದಾದ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಅಗ್ನಿಶಾಮಕ ವಾಹನಗಳು ಅಲ್ಲಿಗೆ ತೆರಳುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ಸೊಪ್ಪು, ಗಿಡದ ಗೆಲ್ಲುಗಳನ್ನು ಬಳಸಿ ಸಾಹಸಪಟ್ಟು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಮತ್ತಷ್ಟು ವಿಸ್ತರಿಸದಂತೆ ತಡೆಯಲು 'ಫೈರ್ ಲೈನ್' ನಿರ್ಮಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ.
ಅರಣ್ಯ ಇಲಾಖೆಯು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಹಗಲಿರುಳು ಶ್ರಮಿಸುತ್ತಿದೆ. ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ಪ್ರವಾಸಿಗರು ಮತ್ತು ಸಾರ್ವಜನಿಕರು ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚದಂತೆ ಅಥವಾ ಬೆಂಕಿ ಅವಘಡ ಸಂಭವಿಸುವುದಕ್ಕೆ ಸಾಧ್ಯವಿರುವ ವಸ್ತುಗಳನ್ನು ಎಸೆಯದಂತೆ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.












Click it and Unblock the Notifications