ಕಾಫಿನಾಡು-ಕರಾವಳಿಗರ ಮನೆಮನದಲ್ಲಿ ಅಣ್ಣಾಮಲೈ
ಚಿಕ್ಕಮಗಳೂರು, ಮೇ 28: ಎಲ್ಲೆಲ್ಲೂ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆಯದ್ದೇ ಮಾತು. ಆದರೆ ಅಧಿಕಾರದಿಂದ ಅವರು ದೂರ ಉಳಿದರೂ ಕರ್ನಾಟಕದ ಸಿಂಗಂ ಅಣ್ಣಾಮಲೈ ಕಾಫಿನಾಡು-ಕರಾವಳಿಗರ ಮನೆಮನದಲ್ಲಿ ಅಜರಾಮರ. ಅಧಿಕಾರದಲ್ಲಿದ್ದಷ್ಟು ದಿನ ಬಡವರು, ನಿರ್ಗತಿಕರ ಜೊತೆಗಿದ್ದು ಜನಸಾಮಾನ್ಯರ ಎಸ್ಪಿಯಾಗಿದ್ದ ಅಣ್ಣಾಮಲೈ ರಾಜೀನಾಮೆ ಜನಸಾಮಾನ್ಯರಿಗೆ ಬರಸಿಡಿಲು ಬಡಿದಂತಾಗಿದೆ. ಅವರ ರಾಜೀನಾಮೆ ನಿರ್ಧಾರಕ್ಕೆ ಮಲೆನಾಡಿಗರ ಪ್ರತಿಕ್ರಿಯೆ ಹೇಗಿದೆ ಎಂದು ಮುಂದೆ ನೋಡಿ...
ನೆಹರು ಅಂದೇ ಹೇಳಿದ್ರು. ಎಲ್ಲೂ ಸಲ್ಲದವರು ರಾಜಕೀಯದಲ್ಲಿ ಸಲ್ಲುತ್ತಾರೆಂದು. ಬೆರಳೆಣಿಕೆಯಷ್ಟು ಮಂದಿಯನ್ನ ಹೊರತುಪಡಿಸಿದ್ರೆ, ಇಂದು ಬಹುತೇಕರು ಅವರೇ. ಭ್ರಷ್ಟರು, ಸುಳ್ಳು, ಮೋಸ-ವಂಚನೆಯನ್ನೇ ಮೈಗೂಡಿಸಿಕೊಂಡವರು. ಆದ್ರೆ, ಮೈಮೇಲಿನ ಖಡಕ್ ಖಾಕಿಯ ಇಸ್ತ್ರಿಯ ನೇರಿಗೆಯಂತೆ ನೇರವಾಗಿ ಸ್ವಾಸ್ಥ್ಯ ಸಮಾಜ, ಬಡವರು, ನಿರ್ಗತಿಕರ ಪರ ನಿಂತ ಅಧಿಕಾರಿಯಂದ್ರೆ ಅಣ್ಣಾಮಲೈ. ಆದ್ರೀಗ, ಅವರು ರಾಜೀನಾಮೆ ನೀಡಿ ರಾಜಕೀಯಕ್ಕೆ ಹೋಗ್ತಿನೆಂಬ ಸುದ್ದಿ ಕಾಫಿನಾಡು-ಕರಾವಳಿಗರಿಗೆ ಬೇಸರ ತರಿಸಿದೆ. ಸರ್. ಆ ಪಾಪದ ಕೂಪಕ್ಕೆ ನೀವು ಬೇಡ. ನಿಮ್ಮಿಂದ ನೆಮ್ಮದಿ ಕಂಡವರು ಸಾಕಷ್ಟಿದ್ದಾರೆ. ಕಾಣಬೇಕಾದವರು ಮತ್ತಷ್ಟು. ಅವರದ್ದು ಐದೇ ವರ್ಷ. ನಿಮ್ಮದ್ದು ಅರವತ್ತು.
ಈ ಇಲಾಖೆಯಲ್ಲೇ ಸೇವೆ ಸಲ್ಲಿಸಿ ಇನ್ನೂ ಉನ್ನತ ಹುದ್ದೆಗೆ ಹೋಗಿ. ಅದೇ ನಮ್ಮ ಖುಷಿ ಅನ್ನೋದು ಅಭಿಮಾನಿಗಳ ಅಂತರಾಳ. ಮತ್ತದೇ ಅಭಿಮಾನಿಗಳು, ಆಡಳಿತದಲ್ಲಿ ಅವರ ಪಾರದರ್ಶಕತೆ ಕಂಡ್ರೆ, ಅವ್ರು ರಾಜೀನಾಮೆ ನೀಡುವಂತವರಲ್ಲ. ಅವ್ರು ಕಮಿಟೆಡ್ ಪೊಲೀಸ್. ಆದ್ರೆ, ಇಂದಿನ ರಾಜಕೀಯ ವ್ಯವಸ್ಥೆಗೆ ಬೇಸತ್ತು ರಾಜೀನಾಮೆ ಕೊಟ್ಟಿದ್ದಾರೆ ಅಂತಿದ್ದಾರೆ.

ಅಣ್ಣಾಮಲೈ ರಾಜೀನಾಮೆಗೆ ಕಾರಣ ಏನೇ ಇರ್ಬೋದು. ಅವ್ರು ಮುಂದಿನ ವೃತ್ತಿ ಯಾವ್ದೆ ಇರ್ಬೋದು. ಆದ್ರೆ, ಕಾಫಿನಾಡು ಕರಾವಳಿಗರ ಮನೆಮನದಲ್ಲಿ ಅಣ್ಣಾಮಲೈ ಹೆಸ್ರು ಅಚ್ಚಳಿಯದೆ ಉಳಿಯಲಿದೆ. ದತ್ತಪೀಠದಲ್ಲಿ ಗೋರಿಗಳು ಧ್ವಂಸವಾದಾಗ ನಂಗೆ ಮೊದ್ಲು ನನ್ ಪೊಲೀಸ್ಸೇ ಮುಖ್ಯ ಅಂದಾಗ ಸಿಬ್ಬಂದಿಗಳಿಗೆ ಅವ್ರ ಮೇಲೆ ಗೌರವ ಹೆಚ್ಚಿತ್ತು. ಅನಾಥ ವೃದ್ಧರು ಅಣ್ಣಾಮಲೈ ನೋಡ್ಬೇಕೆಂದ ಕೂಡಲೇ ಹೋಗಿ ಅವರೊಂದಿಗೆ ಕೂತು ಮಕ್ಕಳಂತೆ ಸಂತೈಸಿದ್ದು ವೃದ್ಧರಲ್ಲಿ ಅನಾಥಪ್ರಜ್ಞೆ ಮಾಯವಾಗಿತ್ತು.
ಮಹಿಳಾ ಪೇದೆ ಮದ್ವೆಯಾಗಿ ತಂಗಿಯನ್ನ ಬೀದಿಗೆ ಬಿಟ್ಟಾಗ ಅಣ್ಣನಂತೆ ಜೊತೆನಿಂತು ಆಕೆಯ ಓದಿನ ನೊಗ ಹೊತ್ತಿದ್ದು, ಮಧ್ಯರಾತ್ರಿ 12 ಗಂಟೆಗೆ ಕೆಟ್ಟು ನಿಂತಿದ್ದ ಪ್ರವಾಸಿ ವಾಹನದಲ್ಲಿದ್ದ ಮಹಿಳೆಯರನ್ನ ತನ್ನ ಕಾರಿನಲ್ಲಿ ಕೂರಿಸಿ, ಕೈಯಲ್ಲಿ ಸ್ಪಾನರ್ ಹಿಡಿದು ವಾಹನ ರಿಪೇರಿ ಮಾಡಿದ್ದು. ಹೇಳೋಕೆ ಒಂದೋ ಎರಡೋ. ಅವ್ರು ಅಧಿಕಾರದಿಂದ ದೂರಾದ್ರು ಕಾಫಿನಾಡಲ್ಲಿ ಇಲಾಖೆ, ಸಮಾಜ, ಜನಸಾಮಾನ್ಯರಿಗಾಗಿ ಅವರು ಮಾಡಿದ ಕೆಲಸ ಮಾತ್ರ ಮರೆಯಲಾಗದ್ದು.
ಒಟ್ಟಾರೆ, ಯಾವುದೇ ದಾರಿ ಆರಿಸಿಕೊಂಡರೂ ಅಣ್ಣಾ ಮಲೈ ಅವರು ಸಾಧನೆ ಮಾಡಲಿ ಅನ್ನೋದಷ್ಟೇ ಇಲ್ಲಿ ಎಲ್ಲರ ಹಾರೈಕೆಯಾಗಿದೆ.












Click it and Unblock the Notifications