Y.S.V Datta: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ವೈ.ಎಸ್.ವಿ ದತ್ತಾ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣಗಳ ದಾಖಲು
ಚಿಕ್ಕಮಗಳೂರು, ಏಪ್ರಿಲ್, 20: ಕಡೂರು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ ದತ್ತಾ ವಿರುದ್ಧ 2014ರಿಂದ 2023ರವರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ 41 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ವೈ.ಎಸ್.ವಿ ದತ್ತಾ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ದತ್ತಾ ಅವರು ಮಾಹಿತಿಯನ್ನು ನೀಡಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಇನ್‌ಸ್ಟ್ರುಮೆಂಟ್ಸ್ (NI)ಕಾಯ್ದೆ 1881 ಕಲಂ 138ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಬಳಿ 8 ಲಕ್ಷ ಸಾಲ ಮಾಡಿರುವ ದತ್ತಾ ಅವರು 2022-23ರಲ್ಲಿ 8 ಲಕ್ಷದ 15 ಸಾವಿರ ಆದಾಯವನ್ನು ಹೊಂದಿದ್ದರು.
17,89 ಲಕ್ಷ ಮೌಲ್ಯದ ಚರಾಸ್ತಿ, 2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 93 .19 ಲಕ್ಷ ಸಾಲ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ವೈ.ಎಸ್.ವಿ ದತ್ತಾ ವಿರುದ್ಧ 41 ಚೆಕ್ ಬೌನ್ಸ್ ಪ್ರಕರಣಗಳ ದಾಖಲು#chikkamagaluru #chequebounce #casesregistered #ysvdatta #Karnataka pic.twitter.com/LXFtSqnde1
— oneindiakannada (@OneindiaKannada) April 20, 2023
ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಸೇರ್ಪಡೆ
ಇನ್ನು ಕಡೂರೂ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ದತ್ತ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೈ.ಎಸ್.ವಿ ದತ್ತ ಅವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಬದಲಾದ ಸಮಯದಲ್ಲಿ ವೈ.ಎಸ್.ವಿ ದತ್ತ ಅವರು ಮರಳಿ ಜೆಡಿಎಸ್ ಗೂಡಿಗೆ ಸೇರಿದ್ದರು.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಚ್ಚರಿಯ ಬೆಳವಣಿಗೆಯಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕಡೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾದ ಅವರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ ನಡೆಸಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.
ದತ್ತ ಅವರ ಅಸಮಾಧಾನದ ನಡೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡ ಅವರು, ದತ್ತ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದರ ಪರಿಣಾಮವಾಗಿ ಗುರುವಾರ ಯಗಟಿಯಲ್ಲಿರುವ ದತ್ತ ಅವರ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ಅವರು ದತ್ತ ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ದತ್ತ ಅವರನ್ನು ಜೆಡಿಎಸ್‍ಗೆ ಬರುವಂತೆ ಮನವಿ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬಳಿ ಕ್ಷಮೆ ಯಾಚಿಸಿದ ವೈಎಸ್‍ವಿ ದತ್ತ, ಮಾಜಿ ಪ್ರಧಾನಿ ದೇವೇಗೌಡ ಮತ್ತು ತಮ್ಮ ನಡುವಿನ ಸಂಬಂಧ ತಂದೆ ಮಗನ ರೀತಿ ಇದೆ. ದೇವೇಗೌಡರ ಮನೆಯ ಬಾಗಿಲು ಬಡಿಯುವ ಆವಶ್ಯಕತೆ ತಮಗಿಲ್ಲ. ಅವರ ಮನೆಯಲ್ಲಿ ಮುಕ್ತವಾಗಿ ಓಡಾಡುವ ಅವಕಾಶ ತಮಗಿದೆ. ಒಂದು ಅತ್ಯಂತ ಕೆಟ್ಟ ವ್ಯವಸ್ಥೆಯನ್ನು ಕಿತ್ತೊಗೆಯಲು ಕಾಂಗ್ರೆಸ್ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದಿದ್ದರು.
ಅಲ್ಲದೇ ಎರಡು ದೊಡ್ಡ ರಾಜಕೀಯ ಪಕ್ಷಗಳನ್ನು, ಅಲ್ಲಿನ ವ್ಯವಸ್ಥೆಯನ್ನು ಮಣಿಸಲು ಈ ಚುನಾವಣೆ ತಮಗೆ ಅನಿವಾರ್ಯವಾಗಿತ್ತು. ಹಾಗಾಗಿ ಪಕ್ಷೇತರನಾಗಿ ಸ್ಫರ್ಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೆ. ಮಾಜಿ ಪ್ರಧಾನಿ ದೇವೇಗೌಡರ ಇಚ್ಛೆಯಂತೆ ಮರಳಿ ಗೂಡಿಗೆ ಬಂದಿದ್ದೇನೆ. ಹಾಗೂ ಕಾರ್ಯಕರ್ತರ ರಕ್ಷಣೆ ನನ್ನ ಹೊಣೆ ಎಂದು ಹೇಳಿದ್ದರು.
ಇನ್ನು ಎಚ್.ಡಿ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷವು ದತ್ತ ಅವರಂತೆ ಬಹಳಷ್ಟು ಜನರಿಗೆ ಟೋಪಿ ಹಾಕಿದೆ. ದತ್ತ ಅವರನ್ನು ಈ ಸಮಯದಲ್ಲಿ ಕೈ ಬಿಡುವುದು ಬೇಡ ಎಂಬ ದೇವೇಗೌಡರ ಸೂಚನೆಯಂತೆ ಇಲ್ಲಿಗೆ ನಾವು ಬಂದಿದ್ದೇವೆ. ಇಲ್ಲಿ ಸೇರಿರುವ ಎಲ್ಲಾ ಕಾರ್ಯಕರ್ತರು ಒಂದೇ ನಿರ್ಣಯದಿಂದ ದೇವೇಗೌಡರ ಆಸೆಯಂತೆ ದತ್ತ ಅವರನ್ನು ಬೆಂಬಲಿಸಬೇಕು. ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಅಷ್ಟೇ ಅಭಿಮಾನದಿಂದ ನೋಡಬೇಕು ಎಂದು ಮನವಿ ಮಾಡಿದ್ದರು.
ನಂತರವ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ದತ್ತ ಅವರು ನಂಬಿ ಮೋಸ ಹೋದ ಸ್ಥಿತಿಯಲ್ಲಿದ್ದಾರೆ. ಸ್ವಾಭಿಮಾನಿ ಜನರೂ ಕೂಡ ಮೊಸ ಹೋಗಿದ್ದಾರೆ. ಅಂತಹ ಕಾರ್ಯಕರ್ತರು ಮತ್ತು ನಾಯಕರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಇಂದು ಪುನಃ ದತ್ತ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗಿದೆ ಎಂದರು.












Click it and Unblock the Notifications