ಲೋಕಸಭೆಯಲ್ಲಿ ಡಾ.ಕೆ.ಸುಧಾಕರ್ ಅಖಾಡಕ್ಕಿಳಿದ್ರೆ ನಾನೇ ಎದುರಾಳಿ: ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ, ಜನವರಿ 11: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಕೆ.ಸುಧಾಕರ್ ಅಖಾಡಕ್ಕಿಳಿದರೆ ನಾನೇ ಎದುರಾಳಿಯಾಗುತ್ತೇನೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಮತ್ತೆ ತೊಡೆ ತಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಕೆ.ಸುಧಾಕರ್ ವಿರುದ್ಧ ಸ್ಪರ್ಧೆಗಿಳಿಯಲು ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿ ನಾನೇ ಎದುರಾಳಿಯಾಗಿ ಮತ್ತೊಮ್ಮೆ ಸೋಲಿಸುತ್ತೇನೆ. ಸುಧಾಕರ್ ಮಾತಾಡಿ ತುಂಬಾ ದಿನ ಆಗುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಮಾತನಾಡಿದ ಅವರು, ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಧಾನ ಪರಿಷತ್ ಸದಸ್ಯ ರವಿ, ಬಾಲಾಜಿ ಮೊದಲಾದವರ ಹೆಸರುಗಳು ತೇಲಾಡುತ್ತಿವೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಸಹ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ತನಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷನಿಷ್ಠೆ ಮುಖ್ಯ ವರಿಷ್ಠರ ಅಣತಿಯನ್ನು ಪಾಲಿಸುತ್ತೇವೆ ಎಂದು ಹೇಳಿದ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿಯಿಂದ ಡಾ. ಕೆ. ಸುಧಾಕರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಅಂತಾದರೆ ತನಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ. ಸುಧಾಕರ್ ವಿರುದ್ಧ ನಿಲ್ಲುತ್ತೇನೆ ಮತ್ತು ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆಯ ನಂತರವೂ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಕ್ಷೇತ್ರದ ಮಾಜಿ ಶಾಸಕ ಕೆ ಸುಧಾಕರ್ ನಡುವಿನ ರಾಜಕೀಯ ವೈಷಮ್ಯ ಮುಂದುವರಿದಿರುವುದು, ಶಾಸಕ ಪ್ರದೀಪ್ ಈಶ್ವರ್ ಮಾತಿನಿಂದ ಸ್ಪಷ್ಟವಾಗಿದೆ.
ಇನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿರುವ ಶಾಸಕ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ, ರಾಜಕೀಯದಲ್ಲಿ 40-50 ವರ್ಷ ಅನುಭವ ಇರುವ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದಹಾಗೆ ಮಾತನಾಡುತ್ತಾನೆ. ಪ್ರತಾಪ್ ಸಿಂಹ, ಸಿದ್ದರಾಮಯ್ಯ ಬಗ್ಗೆ ನಾಲಿಗೆ ಬಿಗಿಹಿಡಿದು ಮಾತಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಾಪ್ ಸಿಂಹ ಅವರೇ ಬಾಯಿ ಮುಚ್ಚುಕೊಂಡು ಇರಬೇಕು. ಬಾಯಿ ತೆವಲು ಕಡಿಮೆ ಮಾಡಿಕೊಳ್ಳಬೇಕು. ಲೋಕಸಭೆಗೆ ಪಾಸ್ ಕೊಟ್ಟ ನೀವು ದೇಶದ್ರೋಹಿಗಳಲ್ವಾ. ಉತ್ತರ ಕೊಡಿ. ಒಂದು ವೇಳೆ ನಾವ್ ಪಾಸ್ ಕೊಟ್ಟಿದ್ದರೆ ಏನು ಪಟ್ಟ ಕಟ್ಟುತಿದ್ರಿ?, ಪ್ರತಾಪ್ ಸಿಂಹ ಒಂದು ಕಲ್ಲು ಹಾಕಿದರೆ, ನಾವು ನಾಲ್ಕು ಕಲ್ಲು ಹಾಕುತ್ತೇವೆ. ಲೋಕಸಭೆ ಪ್ರವೇಶಕ್ಕೆ ಪಾಸ್ ಕೊಟ್ಟ ಪ್ರತಾಪ್ ಸಿಂಹ ದೇಶದ್ರೋಹಿ ಅಲ್ವಾ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications