ಚಿಕ್ಕಬಳ್ಳಾಪುರ: ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆಯಿಂದ ಉಚಿತ ಹೃದಯ ಶಸ್ತ್ರಚಿಕಿತ್ಸೆ ಸೇವೆ
ಚಿಕ್ಕಬಳ್ಳಾಪುರ: ವಸುಧೈವ ಕುಟುಂಬಕಂ ಎನ್ನುವ ಪರಿಕಲ್ಪನೆ ಭಾರತದ ಸಂಸ್ಕೃತಿಯ ಭಾಗವಾಗಿದೆ. ಜಗತ್ತೇ ಒಂದು ಕುಟುಂಬ ಎನ್ನುವ ಪರಿಕಲ್ಪನೆ ಸಮಾಜದ ಭಾಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಗಳು ಸೇರಿದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಮಾನವೀಯತೆ ಮರೆಯಾಗಿದೆ. ದುಡ್ಡೇ ಮಾತನಾಡುವಂತಾಗಿದೆ ಎನ್ನುವ ಅಪವಾದವಿದೆ. ಅದಕ್ಕೆ ತದ್ವಿರುದ್ಧವಾಗಿ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿರುವ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆಯ ಬಡವರಿಗೆ ಆಶಾಕಿರಣವಾಗಿದೆ.
ಸುಧಾರಿತ ಹೃದಯ ಆರೈಕೆಯು ಎಲ್ಲರಿಗೂ ಸಿಗಬೇಕು. ಕೇವಲ ಶ್ರೀಮಂತರಿಗೆ ಸೀಮಿತವಾಗಬಾರದು ಎಂಬ ಗುರಿಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಉಪಕ್ರಮಗಳು, ಆರೋಗ್ಯ ರಕ್ಷಣೆಯಲ್ಲಿ ತಾಂತ್ರಿಕ ಶ್ರೇಷ್ಠತೆ ಮತ್ತು ನಾವೀನ್ಯತೆಯ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್'ನ ಬದ್ಧತೆಯನ್ನು ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆ ಅಳವಡಿಸಿಕೊಂಡಿದೆ.

'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಮಿಷನ್‌ನ ಭಾಗವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು (SMSIMSR) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಮಿನಿಮಲ್ ಇನ್ವೇಸಿವ್ ಟೋಟಲ್ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದ ಜಗತ್ತಿನ ವೈದ್ಯಕೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಭಾರತದ ಮೂರನೇ ಕೇಂದ್ರವಾಗಿದೆ.
2025ರ ಡಿಸೆಂಬರ್ 13 ರಂದು 29 ವರ್ಷದ ಮಹಿಳಾ ರೋಗಿಗೆ ಸಂಪೂರ್ಣ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದರೊಂದಿಗೆ ಅವರು ಹೊಸ ಜೀವನ, ಕನಸುಗಳು ಹಾಗೂ ಅವಕಾಶಗಳನ್ನು ನೀಡಿದಂತಾಗಿದೆ. ಹಾರ್ಟ್ ವಾಲ್ಟ್ ಬ್ಯಾಂಕ್‌ನ ನಿರ್ದೇಶಕರಾದ ಡಾ ಸಿ.ಎಸ್.ಹಿರೇಮಠ್ ನೇತೃತ್ವದಲ್ಲಿ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡವು ಕೋಲ್ಕತ್ತಾದ ಮಣಿಪಾಲ ಆಸ್ಪತ್ರೆಯ ಮುಖ್ಯ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಸರ್ಜನ್ ಡಾ ಸಂದೀಪ್ ಸರ್ದಾರ್ ಮತ್ತವರ ತಂಡದ ಸಹಯೋಗದೊಂದಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಸುಧಾರಿತ ಉಪಕರಣಗಳೊಂದಿಗೆ ನಡೆಸಲಾದ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ರೋಗಿಗೆ 2 ಸೆಂ.ಮೀ ಗಿಂತ ಕಡಿಮೆ ಗಾತ್ರದ ಗಾಯದ ಗುರುತು ಆಗಿದೆ. ಅವರು ಕೇವಲ 72 ಗಂಟೆಗಳಲ್ಲಿ ಚೇತರಿಸಿಕೊಳ್ಳಲು ಮತ್ತು ಅವರನ್ನು ಡಿಸ್ಚಾರ್ಚ್ ಮಾಡಲು ಸಾಧ್ಯವಾಗಿದೆ. ಈ ವೈದ್ಯಕೀಯ ಬೆಳವಣಿಗೆಯು ರೋಗಿಗಳಿಗೆ ಸುರಕ್ಷಿತ ಹೃದಯ ಶಸ್ತ್ರಚಿಕಿತ್ಸೆ ಆಯ್ಕೆಗಳನ್ನು ನೀಡುತ್ತದೆ. ಜೊತೆಗೆ ಕನಿಷ್ಠ ಗಾಯದ ಗುರುತು ಮತ್ತು ತ್ವರಿತ ಚೇತರಿಕೆಯನ್ನು ನೀಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡದ ಪರಿಣಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.












Click it and Unblock the Notifications