ಚೆನ್ನೈ, ನವೆಂಬರ್ 14: 'ಪ್ರೀತ್ಸೇ ಅಂತಾ...' ಪ್ರಾಣ ತಿನ್ನುತ್ತಿದ್ದ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಅವರ ಕುಟುಂಬಸ್ಥರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಸರಸ್ವತಿ ನಗರದ ಎಜಿಎಸ್ ಕಾಲೋನಿಯಲ್ಲಿ ನಡೆದಿದೆ.ಆರೋಪಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಅಡಂಬಾಕ್ಕಂನ ಎಜಿಎಸ್ ಕಾಲೋನಿಯ ಸರಸ್ವತಿನಗರದಲ್ಲಿರುವ ತನ್ನ ಗೆಳತಿ ಇಂದುಜಾ ಮನೆಗೆ ಬಂದಿದ್ದಾನೆ. ಬಾಗಿಲು ಬಡಿಯುತ್ತಿರುವುದು ಆಕಾಶ್ ಎಂದು ತಿಳಿದು ಬಾಗಿಲು ತೆಗೆಯಲು ಹಿಂಜರಿದಿದ್ದಾರೆ. ಹಾಗೂ ಹೀಗೂ ಮನ ಓಲೈಸಿದ ಆಕಾಶ್, ಇಂದುಜಾ ಜತೆ ಮಾತನಾಡಿದ್ದಾನೆ.
ಆದರೆ, ಕೆಲ ನಿಮಿಷದಲ್ಲೇ ಕೋಪಗೊಂಡು ಇಂದುಜಾಳನ್ನು ನಿಂದಿಸುತ್ತಾ ಅವರ ಮನೆಯಿಂದ ಸ್ವಲ್ಪದೂರದಲ್ಲಿದ್ದ ಪೆಟ್ರೋಲ್ ಕ್ಯಾನ್ ಹೊತ್ತು ಮತ್ತೆ ಬಂದಿದ್ದಾನೆ. ಇಂದುಜಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇಂದುಜಾಳನ್ನು ರಕ್ಷಿಸಲು ಬಂದ ಅವರ ತಾಯಿ ರೇಣುಕಾ, ಇಂದುಜಾಳ ತಂಗಿ ನಿವೇತಾಗೂ ಬೆಂಕಿ ಆವರಿಸಿದೆ. ಕೂಗಾಟ, ಚೀರಾಟ ಕೇಳಿ ನೆರೆ ಮನೆಯವರು ಬಂದು ನೋಡಿ, ಹೌಹಾರಿದ್ದಾರೆ. ಆಕಾಶ್ ನನ್ನು ಹಿಡಿಯಲು ಇಂದುಜಾಳ ತಾಯಿ ಹಾಗೂ ನೆರೆಮನೆಯಾತ ಓಡಿದ್ದಾರೆ. ಆದರೆ, ಆಕಾಶ್ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.
ಇಂಜಿನಿಯರಿಂಗ್ ಪದವೀಧರೆ ಇಂದುಜಾಳ ಹಾಗೂ ಅವಳ ತಾಯಿ, ತಂಗಿಯನ್ನು ಕಿಲ್ಪಾಕ್ ಮೆಡಿಕಲ್ ಕಾಲೇಜ್, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಇಂದುಜಾ ಮೃತಪಟ್ಟಿದ್ದಾರೆ. ಶೇ49ರಷ್ಟು ಸುಟ್ಟ ಗಾಯ ಹೊಂದಿರುವ ರೇಣುಕಾ ಹಾಗೂ ಶೇ23ರಷ್ಟು ಗಾಯಗೊಂಡಿರುವ ನಿವೇತಾರಿಬ್ಬರ ಆರೋಗ್ಯ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.
ನೆರೆಮನೆಯಾತನ ನೆರವಿನಿಂದ ಪೊಲೀಸರು, ಆಕಾಶ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಕಾಲದಿಂದಲೂ ಇಂದುಜಾಳನ್ನು ಪ್ರೀತಿಸುತ್ತಿದ್ದೆ. ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕೋಪಕ್ಕೆ ಹೀಗೆ ಮಾಡಿದೆ ಎಂದು ಪೊಲೀಸರಿಗೆ ಆಕಾಶ್ ಹೇಳಿಕೆ ಕೊಟ್ಟಿದ್ದಾನೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!