ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾರಕಾಸ್ತ್ರದಿಂದ ಕೊಚ್ಚಿ ರೋಗಿ ಹತ್ಯೆ!
ಮಧುರೈ, ಜೂನ್ 08 : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಧುರೈನಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Recommended Video
ತಮಿಳುನಾಡಿನ ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯನ್ನು ಸೋಮವಾರ ಮುಂಜಾನೆ ನಾಲ್ವರ ಗುಂಪು ಹತ್ಯೆ ಮಾಡಿದೆ. ಮಾರಕಾಸ್ತ್ರಗಳನ್ನು ಹಿಡಿದು ಆಸ್ಪತ್ರೆಗೆ ನುಗ್ಗಿದ ಗುಂಪು ಹತ್ಯೆ ಮಾಡಿ ಪರಾರಿಯಾಗಿದೆ.
ಕೊಲೆಯಾವ ವ್ಯಕ್ತಿಯನ್ನು 40 ವರ್ಷದ ವಿ. ಮುರುಗನ್ ಎಂದು ಗುರುತಿಸಲಾಗಿದೆ. 2019ರಲ್ಲಿ ಪಟ್ಟಾ ರಾಜಶೇಖರ್ ಎಂಬ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮುರುಗನ್, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಅನಾರೋಗ್ಯದ ಕಾರಣ ಎರಡು ದಿನದಿಂದ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಮುಂಜಾನೆ ಮಾರಕಾಸ್ತ್ರದೊಂದಿಗೆ ನುಗ್ಗಿದ ನಾಲ್ವರು ಮುರುಗನ್ ಹತ್ಯೆ ಮಾಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ರಾಜಾಜಿ ಸರ್ಕಾರಿ ಆಸ್ಪತ್ರೆ ರಾಜ್ಯದ ಹೆಚ್ಚು ಜನ ಸಂದಣಿ ಇರುವ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯಲ್ಲಿ 2500 ಹಾಸಿಗೆಗಳು ಇದ್ದು ಪ್ರತಿದಿನ ಸಾವಿರಾರು ಜನರು ಆಸ್ಪತ್ರೆಗೆ ಬಂದು ಹೋಗುತ್ತಾರೆ.
ಮಾರಕಾಸ್ತ್ರ ಹಿಡಿದ ಗುಂಪು ಆಸ್ಪತ್ರೆಗೆ ನುಗ್ಗಿ ಹತ್ಯೆ ಮಾಡಿರುವುದು ಆಸ್ಪತ್ರೆಯ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪೊಲೀಸರು ಸಿಬ್ಬಂದಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications