ಪಳನಿಸ್ವಾಮಿ ಸಿಎಂ ಆಗಿ ತುಂಬ ಕಾಲ ಉಳಿಯಲ್ಲ ಅನ್ನೋಕೆ ಇಲ್ಲಿವೆ 5 ಕಾರಣ
ತಮಿಳುನಾಡಿನ ವಿಧಾನಸಭೆಯಲ್ಲಿ ನಡೆದ ಸಾಬೀತು ಪರೀಕ್ಷೆಯಲ್ಲಿ ಎಡಪ್ಪಡಿ ಪಳನಿಸ್ವಾಮಿ ಪಾಸಾಗಿದ್ದಾರೆ. ಆದರೆ ಮುಂದೆ ಎದುರಾಗುವ ಪರೀಕ್ಷೆಗಳನ್ನು ಎದುರಿಸಿ, ಇನ್ನು 4 ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸುತ್ತಾರಾ ಎಂಬುದು ಸದ್ಯದ ಪ್ರಶ್ನೆ
ಚೆನ್ನೈ, ಫೆಬ್ರವರಿ 18: ದಿಢೀರ್ ಲಾಟರಿ ಹೊಡೆದು, ತಮಿಳುನಾಡು ರಾಜಕೀಯ ಆಗಸದಲ್ಲಿ ಮಿಂಚುತ್ತಿರುವ ತಾರೆ ಹಾಗೂ ಅಲ್ಲಿನ ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ. 122 ಶಾಸಕರ ಬೆಂಬಲದೊಂದಿಗೆ ಸಿಎಂ ಕುರ್ಚಿ ಹತ್ತಿರುವ 'ಅದೃಷ್ಟವಂತ' ಅವರು. ಆದರೆ ಅವರ ಪಾಲಿಗೆ ಸರಕಾರವಾಗಲಿ, ಮುಖ್ಯಮಂತ್ರಿ ಗಾದಿಯಾಗಲೀ ಅಂದಕೊಂಡಷ್ಟು ಖಂಡಿತಾ ಸಲೀಸಲ್ಲ.
ಯಾವುದೋ ಕಥೆಯಲ್ಲಿ ಓದಿದ ಹಾಗೆ ಮಾಂತ್ರಿಕನ ಜೀವ ಸಮುದ್ರ-ಬೆಟ್ಟ, ಗುಡ್ಡಗಳಾಚೆಗಿನ ಪಂಜರದ ಗಿಳಿಯಲ್ಲಿರುವಂತೆ, ತಮಿಳುನಾಡು ಸರಕಾರದ ರಿಮೋಟ್ ಕಂಟ್ರೋಲ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸುಮ್ಮನೆ ಅಂತೂ ಕೂತಿರಲ್ಲ. ತಾನು ಕೊಡಮಾಡಿದ ಕುರ್ಚಿ, ನಿವಾರಿಸಿದ ತಾಪತ್ರಯದ ಋಣವನ್ನು ಮುಖ್ಯಮಂತ್ರಿ ಕುರ್ಚಿ ತೀರಿಸುತ್ತಲೇ ಇರಲಿ ಎಂದು ಎದುರು ನೋಡುತ್ತದೆ.[ಪಳನಿಗೆ ಬಹುಮತ: ಶನಿವಾರದ 10 ಪ್ರಮುಖ ಬೆಳವಣಿಗೆಗಳು]
ಅದು ಒಂದು ಕಡೆಗಿರಲಿ, ತನ್ನ ಸಂಬಂಧಿಕರನ್ನು ಪಕ್ಷದ ಆಯಕಟ್ಟಿನ ಜಾಗದಲ್ಲಿ ನೆಟ್ಟಿ ಬಂದಿರುವ ಶಶಿಕಲಾ ನಟರಾಜನ್, ಮತ್ತೆ ಅವರನ್ನೇ ತಂದು ಕೂರಿಸಲು ಲೆಕ್ಕ ಹಾಕಿಯೇ ಇಂತಹ ನಿರ್ಧಾರ ಕೈಗೊಂಡಿರುತ್ತಾರೆ ಎಂಬ ಸಂಗತಿ ಪಳನಿಸ್ವಾಮಿ ಅವರಂಥ ಮಾಗಿದ ರಾಜಕಾರಣಿಗೆ ಗೊತ್ತಿಲ್ಲದ್ದೂ ಅಲ್ಲ. ಆದರೆ ಒಮ್ಮೆ ಮುಖ್ಯಮಂತ್ರಿ ಆದರೆ.. ಎಂಬುದು ಹಲವರ ಆಸೆ, ಕನಸು ಮತ್ತು ಗುರಿ ಎಲ್ಲ ಆಗಿರುತ್ತದೆ.[ಪನ್ನೀರ್ ಸೆಲ್ವಂಗೆ ಪರೋಕ್ಷವಾಗಿ ಮತ್ತೊಂದು ಅವಕಾಶ ನೀಡ್ತಾರಾ ಗವರ್ನರ್ ?]
ಅದು ಈಡೇರಿಸಿಕೊಂಡ ತೃಪ್ತಿಯಂತೂ ಇರುತ್ತದೆ. ಆದರೆ ಪಳನಿಸ್ವಾಮಿ ಅಂದುಕೊಂಡಷ್ಟು ಮುಂದಿನ ಹಾದಿ ಸಲೀಸಲ್ಲ ಎಂಬುದನ್ನು ಇಲ್ಲಿ ಕಾರಣ ಸಹಿತ ವಿವರಿಸಲಾಗಿದೆ.

ಕೇಂದ್ರಕ್ಕೆ ಪಳನಿಸ್ವಾಮಿ ಒಲ್ಲದ ಆಯ್ಕೆ
ಕೇಂದ್ರ ಸರಕಾರಕ್ಕೆ ಪಳನಿಸ್ವಾಮಿಗಿಂತ ಒ.ಪನ್ನೀರ್ ಸೆಲ್ವಂ ಮೆಚ್ಚಿನ ಆಯ್ಕೆಯಾಗಿದ್ದರು. ಆದರೆ ಶಶಿಕಲಾ ಅವರ ದಿಢೀರ್ ನಿರ್ಧಾರದಿಂದ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಜತೆಗೆ ಕೇಂದ್ರ ಸರಕಾರಕ್ಕೆ ಅಧಿಕಾರ ಬದಲಾವಣೆ ಸಂತೋಷ ತರುವ ಸಂಗತಿಯಲ್ಲ. ಈಗಲ್ಲದಿದ್ದರೂ ಮುಂದೆ ಪಳನಿಸ್ವಾಮಿಗೆ ಈ ಸಂಗತಿಯೇ ಭಾರೀ ಹಿನ್ನಡೆ ತರುತ್ತದೆ.

ಶಶಿಕಲಾಗೆ ಪಕ್ಷದ ಹಿಡಿತ ಪಡೆಯಲು ಸಾಧ್ಯವೇ?
ದಿವಂಗತ ಮುಖ್ಯಮಂತ್ರಿ ಜಯಲಲಿತಾಗೆ ಪಕ್ಷದ ಮೇಲೆ ಬಲವಾದ ಹಿಡಿತವಿತ್ತು. ಜತೆಗೆ ಆಕೆ ಜನನಾಯಕಿಯಾಗಿದ್ದರು. ಈ ವಿಷಯದಲ್ಲಿ ಶಶಿಕಲಾಗೆ ಅಂಥ ಹಿಡಿತ ಸಾಧ್ಯವೇ? ಅದರಲ್ಲೂ ದೂರದ ಪರಪ್ಪನ ಅಗ್ರಹಾರದಿಂದ ಪಕ್ಷದ ಮೇಲಿನ ಹಿಡಿತವನ್ನು ಇಟ್ಟುಕೊಳ್ಳುವುದು ಸಾಧ್ಯವಿರುವ ಮಾತೇ?

ಪಳನಿಸ್ವಾಮಿ ಮನ್ನಾರ್ ಗುಡಿಯ ಗುಂಪಿನವರಲ್ಲ
ಮನ್ನಾರ್ ಗುಡಿ ಎಂಬುದು ಶಶಿಕಲಾ ಅವರು ಊರು ಎನ್ನುವುದಕ್ಕಿಂತ ಎಐಎಡಿಎಂಕೆಯಲ್ಲಿ ಬೀಡುಬಿಟ್ಟಿರುವ ಆಕೆಯ ಸಂಬಂಧಿಕರ, ಆಪ್ತರ ಗುಂಪು. ಪಳನಿಸ್ವಾಮಿ ಆ ಗುಂಪಿಗೆ ಸೇರಿದವರಲ್ಲ. ಆಕೆ ಸಂಬಂಧಿಕರಾದ ಟಿಟಿವಿ ದಿನಕರನ್ ಹಾಗೂ ಎಸ್ ವೆಂಕಟೇಶ್ ಅವರನ್ನು ಅದೇ ಕಾರಣಕ್ಕೆ ಆಕೆ ಪಕ್ಷದೊಳಗೆ ಕರೆತಂದರು. ದಿನಕರನ್ ಈಗ ಪಕ್ಷ ಉಪ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಶಿಕಲಾ ಗೈರಿನಲ್ಲಿ ಪಕ್ಷದ ಹಿಡಿತ ಆತನ ಬಳಿ ಇರುತ್ತದೆ. ಸರಳ ಬಹುಮತವಿರುವ ಸರಕಾರದ ಪರವಾಗಿ ಎರಡು ಶಕ್ತಿ ಕೇಂದ್ರಗಳಂತೂ ಇವೆ.

ಪನ್ನೀರ್ ಸೆಲ್ವಂ ಸುಮ್ನೆ ಕೂರುವವರಲ್ಲ
ಇನ್ನು ಪನ್ನೀರ್ ಸೆಲ್ವಂ ಮೂರು ಬಾರಿ ಮುಖ್ಯಮಂತ್ರಿ ಆಗಿದ್ದವರು. ಪಕ್ಷ ಒಡೆಯುವುದಕ್ಕೆ ಏನು ಮಾಡಬೇಕೋ ಅಷ್ಟನ್ನು ತುಂಬ ಅಚ್ಚುಕಟ್ಟಾಗಿ ಮಾಡುತ್ತಾರೆ. ಕನಿಷ್ಠ ಪಕ್ಷ ಅಸಮಾಧಾನ ಇರುವ ಶಾಸಕರ ಪಾಲಿಗಂತೂ ಅಯಸ್ಕಾಂತ ಎಂಬುದರಲ್ಲಿ ಎರಡು ಮಾತಿಲ್ಲ. ಮುಂಬರುವ ದಿನಗಳಲ್ಲಿ ಪಕ್ಷ ಇಬ್ಭಾಗ ಆಗುವುದಕ್ಕಿಂತ ಹೋಳು-ಹೋಳಾಗಿ ಬಿಡುವ ಸಾಧ್ಯತೆ ಇದೆ.

ಗೌಂಡರ್ ವರ್ಸಸ್ ತೇವರ್
ಎಐಎಡಿಎಂಕೆಯಲ್ಲಿ ಈಗ ಪ್ರಮುಖ ಜಾತಿಗಳ ಮಧ್ಯೆ ಅಂದರೆ ಗೌಂಡರ್ ವರ್ಸಸ್ ತೇವರ್ ಎಂಬ ಸನ್ನಿವೇಶ ಇದೆ. ಪಳನಿಸ್ವಾಮಿ ಗೌಂಡರ್ ಸಮುದಾಯದವರು. ಶಶಿಕಲಾ ಮತ್ತು ಆಕೆ ಸಂಬಂಧಿಕರು ತೇವರ್ ಸಮುದಾಯಕ್ಕೆ ಸೇರಿದವರು. ತೇವರ್ ಸಮುದಾಯದವರು ಹಿಂದಿನ ಸೀಟಿನಲ್ಲಿ ಕುಳಿತು ಪಕ್ಷವನ್ನು ನಿಯಂತ್ರಿಸುತ್ತಾರೆ. ಆದ್ದರಿಂದ ಗೌಂಡರ್ ಸಮುದಾಯದವರು ದೀರ್ಘ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಕಷ್ಟ.












Click it and Unblock the Notifications