ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು
ಚೆನ್ನೈ, ಮೇ 27: ಸತತ ಎರಡು ತಿಂಗಳ ಕೊರೊನಾ ಲಾಕ್‌ಡೌನ್ ಬಳಿಕ ದೇಶೀಯ ವಿಮಾನ ಸೇವೆ ಆರಂಭಗೊಂಡ ಮೊದಲ ದಿನದಂದೇ ತಮಿಳುನಾಡು ಪ್ರಯಾಣಿಕರೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.
ಚೆನ್ನೈನಿಂದ ಕೊಯಮತ್ತೂರಿಗೆ ವಿಮಾನದಲ್ಲಿ ಆಗಮಿಸಿದ್ದ 23 ವರ್ಷದ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಟೆಕ್ಸ್‌ಟೈಲ್ಸ್ ಸಿಟಿಯಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ.
ಇಂಡಿಗೋ ವಿಮಾನದಲ್ಲಿ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂದು ತಿಳಿದುಬಂದಿದೆ. ಬೇರೆಲ್ಲಾ ಪ್ರಯಾಣಿಕರ ವರದಿ ನೆಗೆಟಿವ್ ಬಂದಿದೆ. ಒಟ್ಟು 90 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಆತ ಮಾಸ್ಕ್ ಧರಿಸಿದ್ದ, ಕೈಗವಸುಗಳನ್ನು ಹಾಕಿಕೊಂಡಿದ್ದ, ಅವರ ಪಕ್ಕದಲ್ಲಿ ಯಾರೂ ಕುಳಿತಿರಲಿಲ್ಲ. ಹೀಗಾಗಿ ಆತನಿಂದ ಬೇರೆಯವರಿಗೆ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ ಇದೆ ಎಂದು ಸಹ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಕೊಯಮತ್ತೂರಿನಲ್ಲಿ ವಿಮಾನ ಲ್ಯಾಂಡಿಂಗ್ ಆದ ಬಳಿಕ ಥರ್ಮಲ್ ಸ್ಕ್ರೀನಿಂಗ್ ವೇಳೆ ತಿಳಿದುಬಂದಿದೆ.ಗಂಟಲು ದ್ರವದ ಮಾದರಿ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರ ಟ್ರಾವೆಲ್ ಹಿಸ್ಟರಿ ಯಾರಿಗೂ ತಿಳಿದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ 646 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈ ಒಂದರಲ್ಲೇ 11,640 ಪ್ರಕರಣಗಳಿವೆ. ಒಟ್ಟು 17,728 ಕೊರೊನಾ ಸೋಂಕಿತರಿದ್ದಾರೆ. ಒಟ್ಟು 127 ಮಂದಿ ಇದುವರೆಗೆ ಸಾವನ್ನಪ್ಪಿದ್ದು ಒಂದೇ ದಿನ ಆರು ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications