ಉಗ್ರರ ಮೇಲೆ ದಾಳಿಗೂ, ಚುನಾವಣೆಗೂ ಸಂಬಂಧವಿಲ್ಲ: ನಿರ್ಮಲಾ ಸೀತಾರಾಮನ್
ಚೆನ್ನೈ, ಮಾರ್ಚ್ 05: ಉಗ್ರರ ವಿರುದ್ಧ ಭಾರತೀಯ ಸೇನೆ ಮಾಡಿದ ದಾಳಿಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ವಾಯುಪಡೆಯು ಮಾಡಿದ ದಾಳಿಯು ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಆಧರಿಸಿ ಮಾಡಿರುವಂತಹದ್ದು ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಬಿಜೆಪಿ 22 ಸೀಟು ಗೆಲ್ಲಲು ಏರ್ಸ್ಟ್ರೈಕ್ ಸಹಾಯ ಮಾಡಲಿದೆ: ಯಡಿಯೂರಪ್ಪ
ಗುಪ್ತಚರ ಇಲಾಖೆಯು, ಉಗ್ರರ ತಾಣಗಳ ಬಗ್ಗೆ ಮಾಹಿತಿ ಒದಗಿಸಿತ್ತು, ಭಾರತದ ಮೇಲೆ ದಾಳಿಗೆ ಸಜ್ಜಾಗಿದ್ದಾರೆಂಬ ಮಾಹಿತಿಯನ್ನು ರವಾನಿಸಿತ್ತು ಹಾಗಾಗಿ ಅವರ ಮೇಲೆ ದಾಳಿ ಆಯಿತು, ಇದು ಸೇನೆಯ ಮೇಲೆ ಆದ ದಾಳಿಯಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಭಾರತೀಯ ವಾಯುಸೇನೆಯು, ಪಾಕಿಸ್ತಾನದ ಬಾಲಾಕೋಟ್ ಸೇರಿ ಇನ್ನೂ ಕೆಲವು ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಈ ವಾಯುದಾಳಿಯಿಂದ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದರು. ಹಾಗಾಗಿ ನಿರ್ಮಲಾ ಸೀತಾರಾಮನ್ ಅವರು ಈ ಪ್ರಶ್ನೆಗಳನ್ನು ಎದುರಿಸಬೇಕಾಯಿತು.
ಇಂಥ ಅಪ್ರಬುದ್ಧ ಮಾತು ಆಡುವ ಅಗತ್ಯವಿತ್ತೆ ಯಡಿಯೂರಪ್ಪನವರೆ?
ಭಾರತವು ಉಗ್ರರ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಕೆಲವು ದಿನಗಳ ಹಿಂದೆ ಸಹ ಸ್ಪಷ್ಟಪಡಿಸಿದ್ದರು.