ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ?
ಚೆನ್ನೈ, ಡಿಸೆಂಬರ್ 08: ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ಗೆ ತೆರಳಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ.
ಶ್ರೀಗಳು ಎಂದಿನಂತೇ ಇಷ್ಟಲಿಂಗ ಪೂಜೆ ನೆರವೇರಿಸಿದ್ದು, ಅವರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಡಾ ಮಹಮ್ಮದ್ ರೇಲಾ ನೇತೃತ್ವದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಲಿದೆ.

ಅಗತ್ಯವಿರುವ ಅವರ ಸಂಪೂರ್ಣ ಆರೋಗ್ಯ ತಪಾಸಣೆಗಳೆಲ್ಲವೂ ನಿನ್ನೆಯೇ ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ 111 ವರ್ಷ ವಯಸ್ಸಿನ ಸ್ವಾಮೀಜಿ ಅವರ ಹೃದಯದಲ್ಲಿ ಹನ್ನೊಂದು ಸ್ಟೆಂಟ್ ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಬದಲಿಸುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.
ಚಿಕಿತ್ಸೆಯ ಸಲುವಾಗಿ ಶುಕ್ರವಾರ ತುಮಕೂರಿನಿಂದ ಬೆಂಗಳೂರಿಗೆ ಬಂದು, ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಶ್ರೀಗಳು ಏರ್ ಆಂಬುಲೆನ್ಸ್ ಮೂಲಕ ಚೆನ್ನೈ ತಲುಪಿದ್ದರು. ಶುಕ್ರವಾರ ಚೆನ್ನೈ ಆಸ್ಪತ್ರೆ ತಲುಪಿದ ಶ್ರೀಗಳು ಆಸ್ಪತ್ರೆಯ ಪ್ರವೇಶ ದ್ವಾರದಿಂದ ತಮ್ಮ ವಿಶೇಷ ಕೊಠಡಿಗೆ ವ್ಹೀಲ್ ಚೇರ್ ನಲ್ಲಿ ಹೋಗಲು ಒಪ್ಪದೆ, ನಡೆದೇ ಹೋದರು. ಶ್ರೀಗಳ ಲವಲವಿಕೆ ಕಂಡು ಸ್ವತಃ ವೈದ್ಯರೇ ಅಚ್ಚರಿಕೊಂಡರು.












Click it and Unblock the Notifications