ಸಿದ್ದಗಂಗಾ ಶ್ರೀಗಳು ಹೇಗಿದ್ದಾರೆ? ಡಿಸ್ಚಾರ್ಜ್ ಯಾವಾಗ?
ಚೆನ್ನೈ, ಡಿಸೆಂಬರ್ 14: ಅನಾರೋಗ್ಯದ ಕಾರಣ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಡಿ.19 ಬುಧವಾರದಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಹೃದಯದ ಸಂಕೀರ್ಣ ಚಿಕಿತ್ಸೆಗೆ ಒಳಗಾದ 111 ವರ್ಷ ವಯಸ್ಸಿನ ಯತಾಯುಷಿ ಶ್ರೀಗಳ ಆರೋಗ್ಯ ಸುಧಾರಿಸುತ್ತಿದ್ದು, ಅವರನ್ನು ಐಸಿಯು ನಿಂದ ಸ್ಪೆಶಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಚೆನ್ನೈನ ರೇಲಾ ಇನ್ ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ನ ಪ್ರಖ್ಯಾತ ವೈದ್ಯರಾದ ಮಹಮ್ಮದ್ ರೇಲಾ ಅವರ ನೇತೃತ್ವದಲ್ಲಿ ಶನಿವಾರ ಮೂರು ಗಂಟೆಗಳ ಕಾಲ ಹೃದಯದ ಯಶಸ್ವೀ ಶಸ್ತ್ರಚಿಕಿತ್ಸೆ ನಡೆದಿತ್ತು.

ಆತಂಕ ಮೂಡಿಸಿದ್ದ ಕಫದ ಸಮಸ್ಯೆ
ಗುರುವಾರ ರಾತ್ರಿ ಶ್ರೀಗಳು ಕಫದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ನಿರಂತರವಾಗಿ ಪ್ರಾಣಾಯಾಮ ಮಾಡುತ್ತಿದ್ದ ಶ್ರೀಗಳು, ಕೆಲದಿನಗಳ ಕಾಲ ಪ್ರಾಣಾಯಾಮ ಮಾಡದಿದ್ದ ಕಾರಣ ಈ ಸಮಸ್ಯೆ ತಲೆದೂರಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಯಾಗಿರುವುದರಿಂದ ಶ್ರೀಗಳು 8 ರಿಂದ 10 ವಾರಗಳ ವಿಶ್ರಾಂತಿ ಪಡೆಯಬೇಕಾಗುತ್ತದೆಂದು ವೈದ್ಯರು ತಿಳಿಸಿದ್ದು, ಡಿಸ್ಚಾರ್ಜ್ ಆದ ನಂತರ ಶ್ರೀಗಳು ತುಮಕೂರಿನ ಸಿದ್ದಗಂಗಾ ಮಠಕ್ಕೆ ವಾಪಸ್ಸಾಗಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

ಇಷ್ಟಲಿಂಗ ಪೂಜೆ
ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ಸ್ವಾಮೀಜಿ ಇಷ್ಟಲಿಂಗ ಪೂಜೆಯನ್ನು ನಿಲ್ಲಿಸಿಲ್ಲ. ಆಸ್ಪತ್ರೆಯಲ್ಲಿ ಶ್ರೀಗಳಿರುವ ಕೊಠಡಿಯಲ್ಲಿ ಮಠದ ವಾತಾವರಣವನ್ನೇ ನಿರ್ಮಿಸಲಾಗಿದ್ದು, ಅಲ್ಲಿ ಅವರು ಇಷ್ಟಲಿಂಗ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ತಮ್ಮ ವಾರ್ಡಿನಲ್ಲೇ ಶ್ರೀಗಳು ಆಗಾಗ ವಾಕಿಂಗ್ ಸಹ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ಶಿಷ್ಯರ ಸಹಾಯ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಲವಲವಿಕೆಯಲ್ಲಿರುವ ಶ್ರೀಗಳು
ಡಿಸೆಂಬರ್ 8 ರಂದು ಮೂರು ಗಂಟೆಗಳ ಕಾಲ ಸಂಕೀರ್ಣ ಶಸ್ತ್ರ ಚಿಕಿತ್ಸೆಗೊಳಗಾದ ಶ್ರೀಗಳು ಲವಲವಿಕೆಯಲ್ಲಿಯೇ ಇದ್ದು, ವೈದ್ಯರನ್ನೇ ಅಚ್ಚರಿಗೊಳಿಸಿದ್ದಾರೆ. ಅವರ ಹೃದಯಕ್ಕೆ ಅಳವಡಿಸಲಾದ 11 ಸ್ಟೆಂಟ್ ಗಳನ್ನು ಬದಲಿಸಿಸುವ ಅಗತ್ಯವಿದ್ದುದರಿಂದ ಶಸ್ತ್ರ ಚಿಕಿತ್ಸೆ ನಡೆದಿತ್ತು.

ವ್ಹೀಲ್ ಚೇರ್ ಬೇಡ ಎಂದಿದ್ದ ಸ್ವಾಮೀಜಿ
ಡಿಸೆಂಬರ್ 7 ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಏರ್ ಆಂಬುಲೆನ್ಸ್ ಮೂಲಕ ಸ್ವಾಮೀಜಿ ಚೆನ್ನೈಗೆ ಬಂದರು. ಚೆನ್ನೈನ ರೇಲಾ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಬಂದಿಳಿದ ಸ್ವಾಮೀಜಿಯವರನ್ನು ಆಸ್ಪತ್ರೆ ಸಿಬ್ಬಂದಿ ವ್ಹೀಲ್ ಚೇರ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಯೊಳಗೆ ಕರೆತರಲು ಮುಂದಾದರೆ, ಒಲ್ಲೆ ಎಂದ ಸ್ವಾಮೀಜಿ, ನಡೆದೇ ಸಾಗಿದರು. ಸ್ವಾಮೀಜಿಯವರ ಈ ಲವಲವಿಕೆ ಅರೆಕ್ಷಣ ಘಟಾನುಘಟಿ ವೈದ್ಯರನ್ನೇ ಬೆರಗುಗೊಳಿಸಿತ್ತು.












Click it and Unblock the Notifications