ಭಾರತದಲ್ಲಿ ಭಯ ಹುಟ್ಟಿಸಿರುವುದು ಏಕೆ ಪಂಜಾಬ್ ಚುನಾವಣೆ!?
ಚಂಡೀಗಢ, ಡಿಸೆಂಬರ್ 28: ಪಂಜಾಬ್ ವಿಧಾನಸಭೆ ಚುನಾವಣೆ 2022ರ ಸುತ್ತ ಆತಂಕ ಛಾಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಕೊವಿಡ್-19 ಸಂಪೂರ್ಣ ಲಸಿಕೆ ಪಡೆದವರ ಸಂಖ್ಯೆ ದೇಶದಲ್ಲೇ ಅತ್ಯಂತ ಕಡಿಮೆಯಾಗಿದೆ. ಕೊವಿನ್ ಅಪ್ಲಿಕೇಷನ್ ಪ್ರಕಾರ, ರಾಜ್ಯದಲ್ಲಿ ಕೊರೊನಾವೈರಸ್ ಲಸಿಕೆಯ ಎರಡೂ ಡೋಸ್ ಅನ್ನು ಪಡೆದುಕೊಂಡವರ ಪ್ರಮಾಣ ಶೇ.40ರಷ್ಟಿದೆ.
ಪಂಜಾಬ್‌ನಲ್ಲಿ ಡಿಸೆಂಬರ್ 27ರ ಅಂಕಿ-ಅಂಶಗಳ ಪ್ರಕಾರ, 89 ಲಕ್ಷ ಫಲಾನುಭವಿಗಳು ಕೊವಿಡ್-19 ಲಸಿಕೆಯ ಎರಡೂ ಡೋಸ್ ಅನ್ನು ಪಡೆದುಕೊಂಡಿದ್ದಾರೆ. 2021ರ ಜನಗಣತಿ ಪ್ರಕಾರ, ರಾಜ್ಯದಲ್ಲಿ 2.27 ಕೋಟಿ ಅರ್ಹ ಫಲಾನುಭವಿಗಳಾಗಿದ್ದಾರೆ. ಈ ಪೈಕಿ ಶೇ.40ರಷ್ಟು ಫಲಾನುಭವಿಗಳು ಮಾತ್ರ ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಪ್ರಸ್ತುತ ಸಂಪೂರ್ಣ ಲಸಿಕೆ ಪಡೆದುಕೊಳ್ಳಲು ಎರಡು ಡೋಸ್ ಕಡ್ಡಾಯವಾಗಿರುತ್ತದೆ. ಪಂಜಾಬ್ ಹೊರತುಪಡಿಸಿ ಕೇವಲ ಎರಡು ರಾಜ್ಯಗಳು ಮಾತ್ರ ಒಟ್ಟು ಜನಸಂಖ್ಯೆಯ ಶೇ.50ಕ್ಕಿಂತ ಕಡಿಮೆ ಫಲಾನುಭವಿಗಳಿಗೆ ಲಸಿಕೆಯನ್ನು ವಿತರಿಸಿದೆ. ಉತ್ತರ ಪ್ರದೇಶದಲ್ಲಿ ಶೇ. 47 ಮತ್ತು ಜಾರ್ಖಂಡ್ ನಲ್ಲಿ ಶೇ. 43ರಷ್ಟು ಜನರು ಸಂಪೂರ್ಣ ಕೊವಿಡ್-19 ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಭಾರತದ 94 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ:
ಭಾರತದಲ್ಲಿ ಡಿಸೆಂಬರ್ ಅಂತ್ಯದ ಹೊತ್ತಿಗೆ 94 ಕೋಟಿ ಅರ್ಹ ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸುವುದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯೋಜನೆ ಹಾಕಿಕೊಂಡಿತ್ತು. ಆದರೆ ದೇಶದ ಮೂರನೇ ಒಂದರಷ್ಟು ಜನರು ಮಾತ್ರ ವಿವಿಧ ದಿನಾಂಕಗಳಲ್ಲಿ ಎರಡನೇ ಡೋಸ್ ಪಡೆದುಕೊಂಡಿರುವುದರ ಹಿನ್ನೆಲೆ ನಿಗದಿತ ಸಮಯದೊಳಗೆ ಎಲ್ಲರಿಗೂ ಲಸಿಕೆಯನ್ನು ನೀಡುವುದು ಅಸಾಧ್ಯವಾಗಿದೆ.
ಮೂರನೇ ಎರಡರಷ್ಟು ಜನರಿಗೆ ಲಸಿಕೆ ನೀಡಿದ ರಾಜ್ಯಗಳು:
ಆದರೆ ಈವರೆಗೂ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಗುಜರಾತ್, ಕೇರಳ, ಉತ್ತರಾಖಂಡ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ದೆಹಲಿಯಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಫಲಾನುಭವಿಗಳಿಗೆ ಎರಡೂ ಡೋಸ್ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿವೆ.
2022ರ ಅಕ್ಟೋಬರ್‌ನಲ್ಲಿ, ThePrint ಭಾರತದ ರಾಜ್ಯಗಳ ಲಸಿಕೆ ವಿತರಣೆ ಸ್ಥಿತಿಯನ್ನು ನಿರ್ಣಯಿಸಿದೆ. ಈ ಸಮಯದಲ್ಲಿ, ಪಂಜಾಬ್‌ನ ವಯಸ್ಕ ಜನಸಂಖ್ಯೆಯ ಸುಮಾರು ಶೇ.70ರಷ್ಟು ಜನರು ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಕೇವಲ ಶೇ.26ರಷ್ಟು ಜನರು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ ಎಂದು ತೋರಿಸುತ್ತಿದೆ.
ಪಂಜಾಬ್‌ನಲ್ಲಿ ಎರಡು ಡೋಸ್ ಪಡೆದವರು ಶೇ.40ರಷ್ಟು ಮಂದಿ:
ಎರಡು ತಿಂಗಳ ನಂತರ, ಡಿಸೆಂಬರ್ 27ರಂತೆ, ಪಂಜಾಬ್‌ನ ವಯಸ್ಕ ಜನಸಂಖ್ಯೆಯಲ್ಲಿ ಕೇವಲ 75ರಷ್ಟು ಜನರು ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ ಹಾಗೂ ಶೇ.40ರಷ್ಟು ಅರ್ಹ ಫಲಾನುಭವಿಗಳು ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. "ಇತರೆ ರಾಜ್ಯಗಳಿಗೆ ಹೋಲಿಸಿದರೆ ಪಂಜಾಬ್‌ನ ಲಸಿಕೆ ವಿತರಣೆ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಂತಹ ದೊಡ್ಡ ರಾಜ್ಯಗಳು ವ್ಯಾಕ್ಸಿನೇಷನ್‌ನಲ್ಲಿ ಹಿಂದೆ ಬಿದ್ದಿವೆ. ಈಗ ಪಂಜಾಬ್ ಕೂಡ ಅದೇ ಪಟ್ಟಿಗೆ ಸೇರಿದೆ," ಎಂದು ಕೇರಳ ಮೂಲದ ಆರೋಗ್ಯ ಅರ್ಥಶಾಸ್ತ್ರಜ್ಞ ರಿಜೋ ಎಂ. ಜಾನ್ ಹೇಳಿದ್ದಾರೆ.
ಪಂಜಾಬ್ ಚುನಾವಣೆ ಹೊಸ್ತಿಲಿನಲ್ಲಿ ಓಮಿಕ್ರಾನ್ ಭೀತಿ:
2022ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ. ಒಂದು ಕಡೆ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದರೆ, ಪಂಜಾಬ್‌ನಲ್ಲಿ ಸಾರ್ವಜನಿಕರ ಅಸಡ್ಡೆಯಿಂದಾಗಿ ಲಸಿಕೆ ವಿತರಣೆ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದು ಕಡೆ ಲಸಿಕೆ ಪಡೆದುಕೊಂಡವರಿಗೂ ಓಮಿಕ್ರಾನ್ ಸೋಂಕು ಅಂಟಿಕೊಳ್ಳುತ್ತಿರುವುದು ಜನರಲ್ಲಿ ಭಯವನ್ನು ಹುಟ್ಟು ಹಾಕಿದೆ. ಇದರ ಮಧ್ಯೆ ಎದುರಾಗಿರುವ ಚುನಾವಣೆಗಳು ಹೊಸ ಆತಂಕವನ್ನು ಸೃಷ್ಟಿಸುತ್ತಿದೆ.












Click it and Unblock the Notifications