ಪಂಜಾಬ್‌ನಲ್ಲಿ Exit Poll ನಿರ್ಬಂಧಿಸಿದ ಚುನಾವಣಾ ಆಯೋಗ
ಚಂಡೀಗಢ, ಫೆಬ್ರವರಿ 1: ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ನಿರ್ಗಮನ ಸಮೀಕ್ಷೆಗಳನ್ನು ನಡೆಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಎಸ್ ಕರುಣಾ ರಾಜು ಆದೇಶಿಸಿದ್ದಾರೆ.
ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೂ ಪಂಜಾಬ್ ವಿಧಾನಸಭೆ ಚುನಾವಣೆ ಕುರಿತು ಎಕ್ಸಿಟ್ ಪೋಲ್ ನಡೆಸುವಂತಿಲ್ಲ. ಎಕ್ಸಿಟ್ ಪೋಲ್ ಕುರಿತಾದ ಸುದ್ದಿಗಳನ್ನು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಆಯೋಗ ತಿಳಿಸಿದೆ.
"ಜನಪ್ರತಿನಿಧಿಗಳ ಕಾಯಿದೆ, 1951ರ ಸೆಕ್ಷನ್ 126 ಎ ನಿಬಂಧನೆಗಳ ಅಡಿಯಲ್ಲಿ, ಫೆಬ್ರವರಿ 10ರ ಬೆಳಿಗ್ಗೆ 7 ರಿಂದ ಮಾರ್ಚ್ 7ರ ಸಂಜೆ 6.30ರವರೆಗೂ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನಿರ್ಗಮನ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ," ಎಂದು ಆಯೋಗ ತಿಳಿಸಿದೆ.

ಮತದಾನಕ್ಕೂ 48 ಗಂಟೆಗಳ ಮುಂಚೆ ಪ್ರಚಾರಕ್ಕೆ ನಿರ್ಬಂಧ:
ಐದು ರಾಜ್ಯಗಳಿಗೆ ಒಟ್ಟು ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರತಿ ಹಂತದಲ್ಲಿ ಚುನಾವಣಾ ಮತದಾನ ಮುಕ್ತಾಯದ ಸಮಯಕ್ಕೂ 48 ಗಂಟೆಗಳಿಗೆ ಮೊದಲೇ ನಿರ್ಬಂಧವನ್ನು ಜಾರಿಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಸುದ್ದಿ ಮಾಧ್ಯಮಗಳು, ಪತ್ರಿಕೆಗಳು ಚುನಾವಣೆಗೆ ಸಂಬಂಧಿಸಿದ ಅಭಿಪ್ರಾಯ ಸಮೀಕ್ಷೆ, ನಿರ್ಗಮನ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
"ಯಾವುದೇ ವ್ಯಕ್ತಿ ಚುನಾವಣೆಗೆ ಸಂಬಂಧಿಸಿದ ನಿರ್ಗಮನ ಸಮೀಕ್ಷೆಯನ್ನು ನಡೆಸಬಾರದು. ಯಾವುದೇ ಎಕ್ಸಿಟ್ ಪೋಲ್‌ನ ಫಲಿತಾಂಶವನ್ನು ಮುದ್ರಣ ಅಥವಾ ಇತರ ಯಾವುದೇ ವಿಧಾನದ ಮೂಲಕ ಪ್ರಕಟಿಸಬಾರದು ಅಥವಾ ಪ್ರಚಾರ ಮಾಡಬಾರದು ಎಂದು ಚುನಾವಣಾ ಆಯೋಗದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪಂಜಾಬ್ ವಿಧಾನಸಭೆ ಚುನಾವಣೆ:
ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ಕಳೆದ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ನೀಡಿದ್ದರು. 117 ಕ್ಷೇತ್ರಗಳಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷವು 20 ಕಡೆಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಶಿರೋಮಣಿ ಅಕಾಲಿ ದಳ 18 ಹಾಗೂ ಇತರರು ಎರಡು ಕಡೆಗಳಲ್ಲಿ ಗೆಲುವು ಸಾಧಿಸಿದ್ದರು.
ಐದು ರಾಜ್ಯಗಳಿಗೆ ಏಳು ಹಂತಗಳಲ್ಲಿ ಮತದಾನ:
ಕಳೆದ ಜನವರಿ 8ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆದರೆ, ಪಂಜಾಬ್ ನಲ್ಲಿ ಫೆಬ್ರವರಿ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications