ಪಂಜಾಬ್ ವಿಧಾನಸಭೆ ಚುನಾವಣೆ: ಸ್ಥಳೀಯ ಸಂಸ್ಥೆ ಎಲೆಕ್ಷನ್‌ನಲ್ಲಿ ಎಎಪಿಗೆ ಮುನ್ನಡೆ
ಚಂಡೀಗಢ, ಡಿಸೆಂಬರ್ 27: ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಪಂಜಾಬ್‌ನಲ್ಲಿ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದೆ. ಈ ನಡುವೆ ಪಂಜಾಬ್‌ನ ರಾಜಧಾನಿ ಚಂಡೀಗಢದಲ್ಲಿ ಇಂದು ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಈವರೆಗೆ ಬಂದಿರುವ ಫಲಿತಾಂಶದ ಪ್ರಕಾರ ಹಾಲಿ ಮೇಯರ್, ಬಿಜೆಪಿಯ ರವಿ ಕಾಂತ್ ಶರ್ಮಾರನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಧಮನ್ ಪ್ರೀತ್ ಸಿಂಗ್ ಸೋಲಿಸಿದ್ದಾರೆ. ಈ ಸ್ಥಳೀಯ ಸಂಸ್ಥೆ ಚುನಾವಣೆಯು ಶುಕ್ರವಾರ ನಡೆದಿದೆ. ಚಂಡೀಗಢದಲ್ಲಿ ಸುಮಾರು 35 ಹೊಸ ಮುನ್ಸಿಪಲ್ ಕೌನ್ಸಿಲರ್ ವಾರ್ಡ್‌ಗಳಿಗೆ ಶುಕ್ರವಾರ ಚುಣಾವಣೆಯು ನಡೆದಿತ್ತು. ಈ ಚುನಾವಣೆಯ ಮತ ಎಣಿಕೆಯು ಇಂದು ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಲಭ್ಯವಾಗಲಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮೊದಲ ಬಾರಿಗೆ ಚಂಡೀಗಢ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಎಎಪಿ 14, ಬಿಜೆಪಿ 10 ಮತ್ತು ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯು 20 ಸ್ಥಾನದಲ್ಲಿ ಹಾಗೂ ಅಕಾಲಿದಳ ಒಂದು ಸ್ಥಾನದಲ್ಲಿ ಹಾಗೂ ಕಾಂಗ್ರೆಸ್ ನಾಲ್ಕು ಸ್ಥಾನದಲ್ಲಿ ಗೆಲುವು ಕಂಡಿತ್ತು. ಆಮ್ ಆದ್ಮಿ ಪಕ್ಷವು ಚುಣಾವಣೆಗೆಯೇ ಸ್ಫರ್ಧೆ ಮಾಡಿರಲಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಸಲಾಗುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಎಂದೂ ಕೂಡಾ ಸ್ಪರ್ಧೆ ಇರುತ್ತದೆ. ಆದರೆ ಈ ಬಾರಿ ಎಎಪಿಯು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸ್ಪರ್ಧೆ ನೀಡುತ್ತಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಎಎಪಿ ಬಲ ವಿಸ್ತಾರ
ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಎಎಪಿ ಎಲ್ಲಾ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ತಯಾರಿ ನಡೆಸಿದೆ. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ಈ ಮಧ್ಯೆ ಪಕ್ಷವು ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಎಎಪಿ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ 18 ಅಭ್ಯರ್ಥಿಗಳ ಹೆಸರು ಸೇರಿದೆ.
ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭಾ ಕ್ಷೇತ್ರಗಳು ಇದೆ. ಈ ಪೈಕಿ ಆಮ್ ಆದ್ಮಿ ಪಕ್ಷ ಈವರೆಗೆ 58 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೊದಲ ಪಟ್ಟಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆ ಬಳಿಕ ಡಿಸೆಂಬರ್ ಆರಂಭದಲ್ಲಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮೂವತ್ತು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಇನ್ನು ಆ ಬಳಿಕ ಎಎಪಿ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 18 ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಿಸಿದೆ. ಈ ಮೂಲಕ ಎಎಪಿ ಘೋಷಣೆಯ ಪ್ರಕಾರ 58 ವಿಧಾನಸಭೆ ಕ್ಷೇತ್ರಗಳಿಗೆ ಈವರೆಗೆ ಅಭ್ಯರ್ಥಿಯನ್ನು ಗೊತ್ತು ಮಾಡಲಾಗಿದೆ. ಇನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭಾರೀ ಪ್ರಚಾರವನ್ನು ಈಗಾಗಲೇ ಆರಂಭ ಮಾಡಿದ್ದಾರೆ. ಹಲವಾರು ಚುನಾವಣಾ ಘೋಷಣೆಗಳನ್ನು ಕೂಡಾ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications