ಕಾಡಂಚಿನ ಜನರ ಕಾಡುವ ಕಾಡುಹಂದಿಗಳು!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 30: ಕಾಡಾನೆ, ಚಿರತೆ, ಹುಲಿಗಳ ಉಪಟಳದಿಂದ ನಲುಗಿದ್ದ ಜಿಲ್ಲೆಯ ಕಾಡಂಚಿನಲ್ಲಿ ಕೃಷಿ ಮಾಡುತ್ತಿರುವ ರೈತರು, ಇದೀಗ ಕಾಡು ಹಂದಿಗಳಿಂದಾಗಿ ತೊಂದರೆ ಅನುಭವಿಸುವಂತಾಗಿದೆ. ಕಾಡಿನಿಂದ ಹಿಂಡು ಹಿಂಡಾಗಿ ಬರುವ ಕಾಡು ಹಂದಿಗಳು ಜಮೀನಿನಲ್ಲಿ ಕಷ್ಟಪಟ್ಟು ಬೆಳೆಸಿದ ಕೃಷಿ ಫಸಲನ್ನು ನಾಶ ಮಾಡುತ್ತಿವೆ.

ಅಷ್ಟೇ ಅಲ್ಲ, ರೈತರ ಮೇಲೆ ದಾಳಿ ಮಾಡಿ ಪ್ರಾಣ ತೆಗೆದಿದ್ದಲ್ಲದೆ, ಗಂಭೀರ ಗಾಯಗೊಳಿಸಿವೆ. ಹೀಗಾಗಿ ಒಬ್ಬಂಟಿಯಾಗಿ ಜಮೀನಿನಲ್ಲಿ ಕೆಲಸ ಮಾಡಲು ರೈತರು ಭಯಪಡುವಂತಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ಸಮೀಪದ ಕುರಟ್ಟಿಹೊಸೂರು ಗ್ರಾಮದ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗಾಗಲೇ ಜಮೀನುಗಳಿಗೆ ನುಗ್ಗುತ್ತಿರುವ ಕಾಡುಹಂದಿಗಳು ರೈತರು ಕಷ್ಟಪಟ್ಟು ಸಾಲ ಮಾಡಿ ಬೆಳೆಸಿದ ಬೆಳೆಯನ್ನೇ ತಿಂದು ಹಾಕುತ್ತಿವೆ.[ಹಿಮವದ್‍ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಂಕಿ: ಹತ್ತಾರು ಎಕರೆ ಭಸ್ಮ]

Farmer

ಇದರಿಂದ ರೈತರು ಕಂಗಾಲಾಗಿದ್ದು, ಕಾಡು ಹಂದಿಗಳ ಹಾವಳಿ ನಿಯಂತ್ರಿಸಲಾಗದ ಸ್ಥಿತಿಗೆ ಬಂದು ತಲುಪಿದ್ದು, ಆತಂಕಕ್ಕೀಡಾಗಿದ್ದಾರೆ. ಕುರಟ್ಟಿಹೊಸೂರು ಗ್ರಾಮದ ರೈತ ರಂಗಶೆಟ್ಟಿ ಎಂಬುವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಸಾಲ ಮಾಡಿ ಮುಸುಕಿನ ಜೋಳದ ಕೃಷಿ ಮಾಡಿದ್ದರು. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಿ ಸಮೃದ್ಧವಾಗಿ ಬೆಳೆಸಿದ್ದರು.

ಇನ್ನೇನು 15 ರಿಂದ 20 ದಿನಗಳಲ್ಲಿ ಕಟಾವು ಮಾಡಿ, ಮಾರಿ ಒಂದಿಷ್ಟು ಹಣ ಪಡೆಯಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು. ಆದರೆ ರಾತ್ರಿ ಜಮೀನಿಗೆ ನುಗ್ಗಿದ ಕಾಡುಹಂದಿಗಳು ಜೋಳದ ಫಸಲನ್ನು ತಿಂದು ನಾಶ ಮಾಡಿವೆ. ಇದರಿಂದ ಸಾಲ ಮಾಡಿ, ಬೆಳೆದ ರೈತ ರಂಗಶೆಟ್ಟಿ ಅವರು ಕಂಗಾಗಲಾಗಿದ್ದಾರೆ. ಇದು ರಂಗಶೆಟ್ಟಿ ಅವರೊಬ್ಬರ ಕಥೆಯಲ್ಲ ಬಹುತೇಕ ರೈತರು ಕಾಡು ಹಂದಿಗಳ ಉಪಟಳದಿಂದ ತೊಂದರೆಗೀಡಾಗಿದ್ದಾರೆ.[ಬಂಡೀಪುರ ಉದ್ಯಾನದ ಪ್ರಾಣಿಗಳಿಗೆ ನೀರು ವ್ಯವಸ್ಥೆ!]

ಇನ್ನು ದನ, ಕುರಿಗಳನ್ನು ಮೇಯಿಸಲು ಕಷ್ಟವಾಗಿದ್ದು, ಮನುಷ್ಯರ ಮೇಲೆಯೇ ಕಾಡುಹಂದಿಗಳು ದಾಳಿ ಮಾಡುತ್ತಿವೆ. ಇದರಿಂದ ಜಮೀನಿನಲ್ಲಿ ಒಬ್ಬೊಬ್ಬರೇ ಕೆಲಸ ಮಾಡುವುದಾಗಲಿ, ಗ್ರಾಮದಲ್ಲಿ ಅಡ್ಡಾಡುವುದಕ್ಕೂ ಭಯಪಡುವಂತಾಗಿದೆ.

ಸುತ್ತಲಿನ ಅರಣ್ಯದಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣದಿಂದ ಮೇವಿಗೆ ತೊಂದರೆಯಾಗಿದೆ. ಗೆಡ್ಡೆ- ಗೆಣಸು ತಿಂದು ಬದುಕುತ್ತಿದ್ದ ಕಾಡುಹಂದಿಗಳು ಆಹಾರ ಹುಡುಕಿಕೊಂಡು ರೈತರ ಜಮೀನುಗಳತ್ತ ಬರುವಂತಾಗಿದೆ. ಇವುಗಳನ್ನು ನಿಯಂತ್ರಿಸಿ ಕೃಷಿ ಮಾಡುವುದಾದರೂ ಹೇಗೆ ಎಂಬ ಭಯ ರೈತರನ್ನು ಕಾಡತೊಡಗಿದೆ. ಅರಣ್ಯ ಇಲಾಖೆ ಕಾಡುಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Wild boar attacks on agriculture field in Chamarajanagar. Farmers facing crop loss and demand forest officers to control wild boars.
Please Wait while comments are loading...