ಹನೂರು: ಕಾಡುಹಂದಿ ಬೇಟೆಯಾಡಿ ಅಡುಗೆ ಮಾಡಿ ತಿನ್ನುವಷ್ಟರಲ್ಲಿ ನಾಲ್ವರ ಬಂಧನ
ಚಾಮರಾಜನಗರ, ಅಕ್ಟೋಬರ್, 23: ತೋಟದ ಮನೆಯಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸ ಶೇಖರಣೆ ಮಾಡಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ತಮಿಳುನಾಡು ಮೂಲದ ಕಾರ್ತಿಕ್ ಪೆರುಮಾಳ್, ತಂಗರಾಜು ಪೆರುಮಾಳ್, ಮಾದೈಯನ್ ಪಳನಿ, ಗೋಪಿನಾಥಂ ಗ್ರಾಮದ ತಂಗರಾಜು ಬಂಧಿತ ಆರೋಪಿಗಳಾಗಿದ್ದಾರೆ.

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಉಪ ವಿಭಾಗದ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿ ಕಾಂತರಾಜು ಎಸ್.ಚೌಹಾಣ್ ಹಾಗೂ ಸಿಬ್ಬಂದಿ ಗಸ್ತಿನಲ್ಲಿದ್ದರು. ಈ ವೇಳೆ ಪೊನ್ನಾಚಿ ಗ್ರಾಮದ ಪಿ.ಕೆ.ಬಸವರಾಜು ಅವರ ತೋಟದ ಮನೆಯಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಕತ್ತರಿಸಿ ಸಂಗ್ರಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಲೆ ಮಹದೇಶ್ವರ ವನ್ಯಜೀವಿ ಉಪ ವಿಭಾಗದ ಎಸಿಎಫ್ ಶಿವರಾಮು ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳು ಹಾಗೂ ಹಂದಿ ಮಾಂಸವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಿಮಿಂಗಲ ವಾಂತಿ ಸಾಗಿಸುತ್ತಿದ್ದವರ ಬಂಧನ: ಬೆಂಗಳೂರಿನಿಂದ ತಮಿಳುನಾಡಿಗೆ ಕಾರಿನಲ್ಲಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಪೊಲೀಸರು ಕೊಳ್ಳೇಗಾಲದ ಹೊಸ ಅಣಗಳ್ಳಿ ಸಮೀಪ ಬಂಧಿಸಿದ್ದಾರೆ.
ಮೈಸೂರು ಆಶೋಕಪುರಂ ನಿವಾಸಿ ವಸಂತ ಕುಮಾರ್(50), ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ವೈರಮುಡಿ(40) ಬಂಧಿತರು. ಅಂಬರ್ ಗ್ರೀಸ್ ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿಟ್ಟಿದ್ದ 4.386 ಕೆ.ಜಿ.ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದಾರೆ. ಇನ್ನು ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications