Hogenakkal Falls: ಕಾವೇರಿ ಆರ್ಭಟಕ್ಕೆ ಕಾಣದಂತೆ ಮಾಯವಾದ ಹೊಗೆನಕಲ್ ಜಲಪಾತ
ಚಾಮರಾಜನಗರ, ಜುಲೈ, 28: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿರುವ ಪರಿಣಾಮ ಅನೇಕ ಜಲಮೂಲಗಳು ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗೆಯೇ ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಕಾವೇರಿ ಅಕ್ಷರಶಃ ರುದ್ರ ತಾಂಡವ ಆಡುತ್ತಿದ್ದು, ಸಾಗರದ ಮಾದರಿ ಇಡೀ ಪರಿಸರ ಗೋಚರಿಸುತ್ತಿದೆ.
ಕಲ್ಲು ಬಂಡೆಗಳ ಮೇಲೆ ಧುಮ್ಮಿಕ್ಕುತ್ತಿದ್ದ ನೀರು ಈಗ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಧುಮ್ಮಿಕ್ಕುವ ದೃಶ್ಯ ಕಣ್ಮರೆಯಾಗಿದ್ದು, ಜಲಪಾತವೇ ಕಾವೇರಿ ಆರ್ಭಟಕ್ಕೆ ಮುಳುಗಡೆಯಾಗಿದೆ. ನಯಾಗರ ಜಲಪಾತದಂತೆ ಕಲ್ಲು ಬಂಡೆಗಳಿಂದ ಧುಮ್ಮಿಕ್ಕುತ್ತಿದ್ದ ನೀರು ಈಗ ಡ್ರೋಣ್ ದೃಶ್ಯದಲ್ಲಿ ಸಾಗರದಂತೆ ಗೋಚರಿಸುತ್ತಿದ್ದು, 1.20 ಲಕ್ಷ ಕ್ಯೂಸೆಕ್ ನೀರಿನ ಹರಿವಿದ್ದು, ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ.

ಕರ್ನಾಟಕದ ರೀತಿ ತಮಿಳುನಾಡಿನಲ್ಲೂ ಕಾವೇರಿ ಪ್ರವಾಹ ಭೀತಿ ಎದುರಾಗಿದ್ದು, ಧರ್ಮಪುರಿ, ಕೃಷ್ಣಗಿರಿ, ಸೇಲಂ, ಈರೋಡ್, ನಾಮಕ್ಕಲ್, ಕರೂರ್, ತಿರುಚಿ, ತಂಜಾವೂರು ಭಾಗಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಲ್ಲಿನ ಸಿಡಬ್ಲೂಸಿ ಎಂಜಿನಿಯರ್ ಪನ್ನೀರಸೆಲ್ವಂ ಹೇಳಿದ್ದಾರೆ.
ಕೊಳ್ಳೇಗಾಲ ಭಾಗದಲ್ಲಿ ಪ್ರವಾಹ ಭೀತಿ: ಕಾವೇರಿ ಹೊರಹರಿವು ಹೆಚ್ಚಾದಂತೆ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಸರಗೂರು, ಅಗ್ರಹಾರ, ಹಳೇ ಹಂಪಾಪುರ ಸೇರಿದಂತೆ 9 ಊರುಗಳಲ್ಲಿ ಆತಂಕ ಎದುರಾಗಿದ್ದು, ಕಾಳಜಿ ಕೇಂದ್ರಗಳಿಗೆ ಜನರೆಲ್ಲರೂ ಬರುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಜಾನುವಾರುಗಳಿಗಾಗಿ ಗೋಶಾಲೆ ತೆರೆಯಲಾಗುತ್ತಿದೆ.
ಕಾವೇರಿ ಹೊರಹರಿವು ಹೆಚ್ಚಳ: ಹಾಗೆಯೇ ಕಾವೇರಿ ಹೊರಹರಿವು ಹೆಚ್ಚುತ್ತಿದ್ದಂತೆ ತಮಿಳುನಾಡು ಕರ್ಣಾಟಕ ಜಲಗಡಿಯಾಗಿರುವ ಹೊಗೆನಕಲ್ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಕಾವೇರಿ ಕೊಳ್ಳದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆ ಮತ್ತು ನದಿಯ ಹೊರಹರಿವು ಹೆಚ್ಚಾಗಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕಲ್ಲು-ಬಂಡೆಗಳ ನಡುವೆ ಜಲ ವೈಯ್ಯಾರ ಸೃಷ್ಟಿಯಾಗಿದೆ.
ಕಳೆದ ವರ್ಷ ಬರ ಆವರಿಸಿದ್ದ ಹಿನ್ನೆಲೆ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಆಗುತ್ತಿದ್ದು, ಹೊಗೆನಕಲ್‌ನಲ್ಲಿ ಮತ್ತೇ ಜಲ ವೈಭವ ಮರುಕಳಿಸಿದೆ. ನೀರಿನ ಪ್ರಮಾಣ ಏರುಗತಿ ಇರುವುದರಿಂದ ತಮಿಳುನಾಡು ಮತ್ತು ಕರ್ನಾಟಕ ಎರಡೂ ಭಾಗದಲ್ಲೂ ಜಲಪಾತದ ಅದ್ಭುತ ನೋಟ ಸಿಗುತ್ತಿದೆ.












Click it and Unblock the Notifications