ಗುಂಡ್ಲುಪೇಟೆ: ಚೆಂಡು ಹೂ ಸಂಸ್ಕರಣಾ ಘಟಕ ಸ್ಥಾಪನೆಗೆ ಸ್ಥಳೀಯರ ತೀವ್ರ ವಿರೋಧ
ಚಾಮರಾಜನಗರ, ಅಕ್ಟೋಬರ್ 29: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ಚೆಂಡು ಹೂ ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಜಿಲ್ಲಾಡಳಿತ ಭವನದ ಮುಂಭಾಗ ಉದ್ಯಾನವನದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಗುರುವಿನಪುರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವತಿಯಿಂದ ಚೆಂಡು ಹೂ ಸಂಸ್ಕರಣಾ ಘಟಕವನ್ನು ಮಾಡಲು ಮುಂದಾಗಿರುವುದು ಖಂಡನೀಯ. ಈ ಸಂಬಂಧ ಆ ಗ್ರಾಮದಲ್ಲಿ ಗ್ರಾಮಸಭೆಯನ್ನು ಸಹ ಮಾಡಲಾಗಿದ್ದು, ಗ್ರಾಮಸ್ಥರು ಒಕ್ಕೊರಲಿನಿಂದ ಈ ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ಘಟಕ ಸ್ಥಾಪನೆಯಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕುಡಿಯುವ ನೀರು ಕಲುಷಿತವಾಗಲಿದೆ. ಅದರ ದುರ್ನಾತ ಸುಮಾರು ದೂರ ಹೋಗಲಿದ್ದು, ಯಾವುದೇ ಕಾರಣಕ್ಕೂ ಅಲ್ಲಿ ಸಂಸ್ಕರಣಾ ಘಟಕ ತೆರೆಯಲು ಅವಕಾಶ ನೀಡಬಾರದು. ಬದಲಿಗೆ ಬದನಗುಪ್ಪೆ ಕೈಗಾರಿಕೆ ಪ್ರದೇಶದಲ್ಲಿ ಘಟಕ ತೆರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರಿವಿ ಇಟ್ಟಿರುವ ಚಿನ್ನವನ್ನು ಶೀಘ್ರವಾಗಿ ರೈತರಿಗೆ ಕೊಡಿಸಿ ಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಶಿವಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಗುರುವಿನಪುರ ಗ್ರಾಮಸ್ಥರು ಭಾಗವಹಿಸಿದ್ದರು.

ಆನ್‌ಲೈನ್ ಬೆಟ್ಟಿಂಗ್ ಗೇಮ್, ವೆಬ್ ಸೈಟ್‌ಗಳನ್ನು ನಿಷೇಧಿಸುವಂತೆ ಮನವಿ
ಚಾಮರಾಜನಗರ: ಆನ್‌ಲೈನ್ ಬೆಟ್ಟಿಂಗ್ ಆಟಗಳಿಂದ ಆಗುತ್ತಿರುವ ತೊಂದರೆಯನ್ನು ತಡೆಯುವ ಹಾಗೂ ಆನ್‌ಲೈನ್ ಬೆಟ್ಟಿಂಗ್ ಗೇಮ್ ಹಾಗೂ ವೆಬ್ ಸೈಟ್‌ಗಳನ್ನು ನಿಷೇಧಿಸುವಂತೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬುಗೆ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುರೇಶ್ ಮನವಿ ಮಾಡಿದರು.
ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಎಂ.ಬಸವರಾಬು ಪಡಕೋಟಿ ಸುಮಾರು 20 ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಆನ್‌ಲೈನ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ಗೇಮಿಂಗ್ ವೆಬ್ ಸೈಟ್ ಗಳಿಂದ ಆಗುತ್ತಿರುವ ಅನಾಹುತಗಳನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ತಿಳಿಸಿದ್ದಾರೆ.
ಹಲವಾರು ವಿದ್ಯಾರ್ಥಿಗಳು, ಯುವಕರು ಇದನ್ನು ಚಟವಾಗಿಸಿಕೊಂಡಿದ್ದು, ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಅನೇಕ ಯುವಕರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗಾಗಲೇ ಕಮರ್ಷಿಯಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೆಟ್ಟಿಂಗ್ ವೆಬ್‌ಸೈಟ್ ನಡೆಸುತ್ತಿದ್ದ ಇಬ್ಬರು ಬುಕ್ಕಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.
ಇದರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರಿಗೆ ಅರಿವು ಮೂಡಿಸಲು ಹಾಗೂ ಈ ರೀತಿಯಾಗಿ ಮೋಸ ಮಾಡುವ ಉದ್ದೇಶದಿಂದಲೇ ಜನರನ್ನು ವಂಚಿಸುತ್ತಿರುವ ಆನ್‌ಲೈನ್ ಗೇಮಿಂಗ್ ವೆಬ್ ಸೈಟ್ ಹಾಗೂ ಅಪ್ಲಿಕೇಷನ್‌ಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರ ಪರವಾಗಿ ಗುಂಡ್ಲುಪೇಟೆ ತಾಲೂಕು ಘಟಕದಿಂದ ಮನವಿಯನ್ನು ಸಲ್ಲಿಸಿದ್ದಾರೆ.












Click it and Unblock the Notifications