ಗುಂಡ್ಲುಪೇಟೆ: ದಾರಿ ತಪ್ಪಿ ನಾಡಿಗೆ ಬಂದ ಜಿಂಕೆ ಮೇಲೆ ಬೀದಿ ನಾಯಿಗಳ ದಾಳಿ
ಚಾಮರಾಜನಗರ, ಮೇ, 21: ದಾರಿ ತಪ್ಪಿ ಕಾಡಿನಿಂದ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳ ದಾಳಿಯಿಂದ ಗ್ರಾಮಸ್ಥರು ಬಿಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಮದ್ದೂರು ವಲಯ ವ್ಯಾಪ್ತಿಯ ಮದ್ದೂರು ಗ್ರಾಮದಲ್ಲಿ ಆಹಾರ ಹರಸಿ ದಾರಿತಪ್ಪಿ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಸುತ್ತುವರಿದು ಕಚ್ಚಿ ಗಾಯಗೊಳಿಸಿದ್ದವು. ಇದನ್ನು ಕಂಡ ಸಾರ್ವಜನಿಕರು ನಾಯಿಗಳನ್ನು ಚದುರಿಸಿ ಜಿಂಕೆಯನ್ನು ರಕ್ಷಣೆ ಮಾಡಿದ್ದು, ನಂತರ ಅದನ್ನು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಜಿಂಕೆಯನ್ನು ಜೀಪಿನಲ್ಲಿ ಕೊಂಡೊಯ್ದು ಗಾಯಕ್ಕೆ ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾಯಿಗಳ ದಾಳಿಗೆ 10 ಕುರಿ ಬಲಿ: ನಾಯಿಗಳ ಹಿಂಡು ದಾಳಿ ನಡೆಸಿದ 10 ಕುರಿಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿಯಲ್ಲಿ ಭಾನುವಾರ ಸಂಜೆ (ಮೇ 19) ನಡೆದಿದೆ.
ಮಾಡ್ರಹಳ್ಳಿ ಗ್ರಾಮದ ನಾಗಮ್ಮ ಎಂಬುವರು ತಮ್ಮ ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದ ವೇಳೆ ನಾಯಿಗಳ ಹಿಂಡು ದಾಳಿ ಮಾಡಿ 10 ಕುರಿಗಳನ್ನು ಕೊಂದು ಹಾಕಿ, ಎರಡು ಕುರಿಗಳನ್ನು ತೀವ್ರವಾಗಿ ಗಾಯಗೊಳಿಸಿವೆ.
ಕುರಿಗಳ ಮೇಲೆ ದಾಳಿ ಮಾಡಿದ್ದು, ನಾಯಿಗಳು ಸಾಕು ನಾಯಿಗಳಾ ಅಥವಾ ಬೀದಿ ನಾಯಿಗಳಾ ಎಂಬ ಮಾಹಿತಿ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಇನ್ನು "ತನ್ನ ಬಳಿ ಇದ್ದ 12 ಕುರಿಗಳಲ್ಲಿ 10 ಕುರಿಗಳು ಇಲ್ಲವಾಗಿವೆ. ತನಗೆ ಸೂಕ್ತ ಪರಿಹಾರ ಕೊಡಬೇಕು," ಎಂದು ನಾಗಮ್ಮ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸದ್ಯ ನಾಗಮ್ಮ ಅವರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆರೆಯ ಬಳಿ ಆನೆ ಸಾವು: ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗದ ವ್ಯಾಪ್ತಿಯ ಮೊಳೆಯೂರು ವಲಯದ ಹಿಡುಗಲಪಂಚೀ ಕೆರೆ ಬಳಿ ನಡೆದಿದೆ.
ಮೃತ ಆನೆಯು ಹೆಣ್ಣಾನೆಯಾಗಿದ್ದು 25-30 ವರ್ಷ ವಯಸ್ಸಿನದು ಎಂದು ಅಂದಾಜು ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 1ಕ್ಕೆ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ಮಾಡುವಾಗ ಕಾಡಾನೆಯೊಂದು ಕೆರೆಯ ಸಮೀಪ ಬಿದ್ದಿರುವುದನ್ನು ಗಮನಿಸಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಬಂಡೀಪುರ ಸಿಎಫ್ಒ ಎಸ್.ಪ್ರಭಾಕರನ್, ಹೆಡಿಯಾಲ ಎಸಿಎಫ್ ಜಿ.ರವೀಂದ್ರ, ಪಶುವೈಧ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಸ್ಧಳಕ್ಕೆ ಭೇಟಿ ನೀಡಿ, ಕಾಡಾನೆಯನ್ನು ಪರಿಶೀಲಿಸಿದಾಗ ಆನೆಯು ಅನಾರೋಗ್ಯಕ್ಕೆ ಒಳಗಾಗಿದ್ದು ತಿಳಿದುಬಂದಿದೆ.
ಈ ಸಂಬಂಧ ಇಲಾಖಾ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ಮಾಡಿಸಿದರೂ ಸೋಮವಾರದಂದು ಚಿಕಿತ್ಸೆ ಫಲಸದೇ ಕಾಡಾನೆ ಮೃತಪಟ್ಟಿದೆ.
ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಕಾಡಾನೆಯ ಅಂಗಾಂಗಳನ್ನು ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್‍ಗಳನ್ನು ಕಳುಹಿಸಿ ಮೃತ ಹೆಣ್ಣಾನೆಯನ್ನು ಅಲ್ಲಿಯೇ ಹೂಳಲಾಗಿದೆ.












Click it and Unblock the Notifications