ಹೆಚ್ಚಾಯ್ತು ಸೇವ್ ಬಂಡೀಪುರ ಕೂಗು-ಡಿಕೆಶಿ ವಿರುದ್ಧ ರೊಚ್ಚಿಗೆದ್ದ ಪರಿಸರ ಪ್ರೇಮಿಗಳು
ಚಾಮರಾಜನಗರ, ನವೆಂಬರ್, 13: ಬಂಡೀಪುರ-ವಯನಾಡು ನಡುವೆ ರಾತ್ರಿ ಸಂಚಾರ ನಿಷೇಧ ತೆರವಿಗೆ ಡಿ.ಕೆ.ಶಿವಕುಮಾರ್ ಭರವಸೆ ಕೊಟ್ಟು ಬಂದಿದ್ದಾರೆ. ಈ ನಿರ್ಧಾರ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಮತ್ತೇ ಸೇವ್ ಬಂಡೀಪುರ ಕೂಗು ಹೆಚ್ಚಾಗಿದೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿಯಾಗಿ ರಿಯಾಕ್ಷನ್ಸ್ ಬರುತ್ತಿವೆ ಎಂದು ಇಲ್ಲಿ ತಿಳಿಯಿರಿ.
ಟ್ವೀಟ್‌ನಲ್ಲಿ ಸೇವ್ ಬಂಡೀಪುರ ಹ್ಯಾಷ್ ಟ್ಯಾಗ್ ಬಳಸಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನು ಕೇರಳ ಲಾಬಿಗೆ ಕರ್ನಾಟಕ ಸರ್ಕಾರ ಮಣಿಯದೇ ವನ್ಯಸಂಪತ್ತನ್ನು ಕಾಪಾಡಬೇಕು. ಅಲ್ಲದೆ ಡಿ.ಕೆ.ಶಿವಕುಮಾರ್ ತೆಗೆದುಕೊಂಡಿರುವ ನಿಲುವಿಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಹೇಳಿಕೆ ವಿರುದ್ಧ ಆಕ್ರೋಶ: ಬಂಡೀಪುರ ಭಾರತದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿದ್ದು, ವನ್ಯಜೀವಿಗಳ ರಕ್ಷಣೆಗಾಗಿ 2009ರಿಂದ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಬಂಡೀಪುರ-ವಯನಾಡು ಹಾಗೂ ಬಂಡೀಪುರ-ಊಟಿ ರಸ್ತೆ ಸಂಚಾರಕ್ಕೆ ನಿರ್ಬಂಧವಿದೆ. ಈ ಹಿಂದೆ ಸಾಕಷ್ಟು ಬಾರಿ ಕೇರಳ ಸರ್ಕಾರ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಲು ಪ್ರಯತ್ನಿಸಿತ್ತು. ಈಗ ಮತ್ತೇ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಹೇಳಿಕೆಗಳಿಂದ ಮತ್ತೇ ಮುನ್ನಲೆಗೆ ಬಂದಿದೆ.
ಯದುವೀರ್ ಪ್ರಿತಿಕ್ರಿಯೆ ಏನು?: ಈ ಬಗ್ಗೆ ಟ್ವೀಟ್ ಮಾಡಿದ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ವಯನಾಡ್ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತಾದ ಬಂಡಿಪುರ ಅಭಯಾರಣ್ಯದ ಮಧ್ಯೆ ಹಾದು ಹೋಗುವ ಎನ್‌ಎಚ್ 766ರ ರಾತ್ರಿ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ಕೇರಳದಲ್ಲಿ ನೀಡಿರುವ ಹೇಳಿಕೆಯು ಬೇಜವಾಬ್ದಾರಿ ಮತ್ತು ಖಂಡನೀಯವಾಗಿದೆ.
ಬಂಡೀಪುರದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ವೈವಿಧ್ಯತೆಯು ಅದರೊಳಗೆ ಅಭಿವೃದ್ಧಿ ಹೊಂದುತ್ತಿರುವ ವಿವಿಧ ಪ್ರಭೇದಗಳ ವನ್ಯಜೀವಿಗಳಿಗೆ ಸೇರಿದ ಸಂಪತ್ತು. ಈ ಅಭಯಾರಣ್ಯದ ಮೂಲಕ ರಾತ್ರಿ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ವನ್ಯಜೀವಿಗಳಿಗೆ ಅಪಾಯವಿದೆ ಮತ್ತು ಮಾನವ-ವನ್ಯಜೀವಿ ಸಂಘರ್ಷಕ್ಕೆ ಇದು ಎಡೆ ಮಾಡಿಕೊಡುತ್ತದೆ.
ಬೇರೆ ರಾಜ್ಯದಲ್ಲಿನ ಚುನಾವಣಾ ಲಾಭಕ್ಕಾಗಿ ಕರ್ನಾಟಕದ ವನ್ಯಜೀವಿಗಳಿಗೆ ಧಕ್ಕೆ ತರುವುದು ಸಮಂಜಸವಲ್ಲ. ನಮ್ಮ ಸರ್ಕಾರವು ಈ ಪರಿಸರ ವಲಯಗಳ ರಕ್ಷಣೆಯ ನಿಟ್ಟಿನಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ರಕ್ಷಿಸಬೇಕಾಗಿದೆ.












Click it and Unblock the Notifications