ಗುಂಡ್ಲುಪೇಟೆ: ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದ ₹3,00,000 ಲಕ್ಷಕ್ಕೂ ಅಧಿಕ ಹಣ ವಶ
ಚಾಮರಾಜನಗರ, ಮಾರ್ಚ್, 21: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಚೆಕ್ ಪೊಸ್ಟ್‌ನಲ್ಲಿ ನಡೆದಿದೆ.
ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆ ತಾಲೂಕಿನ ಕೇರಳ ಹಾಗೂ ತಮಿಳುನಾಡು ಗಡಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ವೇಳೆ ದಾಖಲೆ ಇಲ್ಲದ 3 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಮಧ್ಯೆ ಗುರುವಾರ ಖುದ್ದು ತಪಾಸಣೆಗೆ ಇಳಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮತ್ತು ತಂಡ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಈಚರ್ ವಾಹನ ಚಾಲಕ ಹ್ಯಾರಿಸ್‌ನಿಂದ 97,000 ರೂಪಾಯಿ, ಪಿಕ್ ಅಪ್ ಚಾಲಕ ಜಂಶೀರ್ ನಿಂದ 1,17 ಲಕ್ಷ ರೂಪಾಯಿ ಹಾಗೂ ಕಾರು ಚಾಲಕ ಜೋಶ್ ಕೈನಾಂಡಿ ಅವರಿಂದ 1 ಲಕ್ಷ ರೂಪಾಯಿ ಸೇರಿ ಒಟ್ಟು 3.14 ಲಕ್ಷ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ತಮಿಳುನಾಡಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮಾರ್ಗವಾಗಿ ರಾಜ್ಯ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ತಪಾಸಣೆ ನಡೆಸುತ್ತಿದ್ದು, ವಾಹನ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳಲಾಗುತ್ತಿದೆ.
1,24,800 ರೂಪಾಯಿ ಹಣ ವಶ: ಪಾಲರ್ ಚೆಕ್ ಪೋಸ್ಟ್‌ನಲ್ಲಿ ಫೀಕಪ್ ವಾಹನವೊಂದರಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,24,800 ರೂಪಾಯಿ ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಗುರುವಾರ (ಮಾರ್ಚ್ 21) ನಡೆದಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಹನೂರು ತಾಲ್ಲೂಕಿನ ತಮಿಳುನಾಡು ಗಡಿಹಂಚಿನಲ್ಲಿ ತೆರೆಯಲಾಗಿರುವ ಅಂತರ ರಾಜ್ಯ ಚೆಕ್ ಪೊಸ್ಟ್‌ನಲ್ಲಿ ಚುನಾವಣೆ ಅಧಿಕಾರಿಗಳು ವಾಹನಗಳನ್ನು ತಪಾಸಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮೆಟ್ಟೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಪೀಕಪ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ನಗದು ಇರುವುದು ಕಂಡುಬಂದಿದೆ. ಹಣದ ಬಗ್ಗೆ ವಿಚಾರಿಸಿದಾಗ ಸ್ಪಷ್ಟ ಮತ್ತು ಸಮಂಜಸ ಉತ್ತರವನ್ನು ನೀಡದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಹಾಗೂ ಚುನಾವಣೆ ಅಧಿಕಾರಿಗಳ ತಂಡ ಹಣವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
₹1,00,000 ಹಣ ವಶ: ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ 1 ಲಕ್ಷ ರೂಪಾಯಿ ಹಣವನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ದಾಸನಪುರ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದಾಸನಪುರ ಚೆಕ್ ಪೋಸ್ಟ್‌ನಲ್ಲಿ ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದ ಕಾರನ್ನು (KA-51-MW-330) ತಪಾಸಣೆ ಮಾಡಿದ ವೇಳೆ ದಾಖಲೆ ಇಲ್ಲದೆ 1 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇನ್ನು ಈ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.












Click it and Unblock the Notifications