ಚಾಮರಾಜನಗರ: ಅಬ್ಬಬ್ಬಾ ಕೆ.ಜಿ ಲೆಕ್ಕದಲ್ಲೂ ಅಲ್ಲ.. ಬರೋಬ್ಬರಿ 2 ಕ್ವಿಂಟಾಲ್ ಒಣ ಗಾಂಜಾ ವಶ.!, ಇದರ ಮೌಲ್ಯ ಎಷ್ಟು ಕೋಟಿ?
ಚಾಮರಾಜನಗರ, ಫೆಬ್ರವರಿ, 14: ಬರೋಬ್ಬರಿ ಎರಡು ಕ್ವಿಂಟಾಲ್‌ನಷ್ಟು ಒಣ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದ ಮಧುವನಹಳ್ಳಿ ಬೈಪಾಸ್ ಬಳಿ ಮಂಗಳವಾರ (ಫೆಬ್ರವರಿ 13) ನಡೆದಿದೆ.
ಕೊಳ್ಳೇಗಾಲ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ 1.44 ಕೋಟಿ ಮೌಲ್ಯದ ಗಾಂಜಾ ಜೊತೆ 25 ಲಕ್ಷ ಮೌಲ್ಯದ ಲಾರಿ, 9 ಲಕ್ಷ ಮೌಲ್ಯದ ಪ್ಲೈವುಡ್ ಶೀಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಂಗಳೂರು, ದಾವಣಗೆರೆ, ಯಾದಗಿರಿ, ಹರಹರ ಮೂಲದವರಾಗಿದ್ದು, ಬೆಂಗಳೂರು ಮೂಲದ ಸೆಂದಿಲ್ ಕುಮಾರ್, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್ ಹಾಗೂ ಹರಿಹರದ ವಿನಾಯಕ ಬಂಧಿತ ಆರೋಪಿಗಳಾಗಿದ್ದಾರೆ.

ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದವರ ಮೇಲೆ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಕ್ಕೆ ಪಡೆದಿದ್ದಾರೆ. ನಾಲ್ಕು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 221 ಕೆ.ಜಿ.ಒಣ ಗಾಂಜವನ್ನು ಪ್ಲೈವುಡ್ ಶೀಟ್‌ಗಳೊಂದಿಗೆ ಅಡಗಿಸಿಕೊಂಡು ಬರುತ್ತಿದ್ದುದು ಪತ್ತೆಯಾಗಿದೆ.
ಸದ್ಯ, ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications