ಮಣಿಪುರ ಬೆತ್ತಲೆ ಮೆರವಣಿಗೆ ಖಂಡಿಸಿ ಚಾಮರಾಜನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ
ಚಾಮರಾಜನಗರ, ಜುಲೈ, 21: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಚಾಮರಾಜನಗರದ ಜಿಲ್ಲಾಡಳಿತ ಭವನದ ಎದುರು ಕನ್ನಡಪರ ಹೋರಾಟಗಾರರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.
ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಶರ್ಟ್ ಕಳಚಿ ಅರೆ ಬೆತ್ತಲೆಯಾಗಿ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಮಣಿಪುರದ ಘಟನೆ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಅಲ್ಲಿನ ಪುಂಡರು ಅಮಾನವೀಯವಾಗಿ, ಅನಾಗರಿಕರಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಮಹಿಳೆಯರನ್ನು ಮೆರವಣಿಗೆ ಮಾಡಿದ ಎಲ್ಲಾ ಪುಂಡರನ್ನು ಸೆರೆಹಿಡಿದು ಮರಣದಂಡನೆ ಶಿಕ್ಷೆ ವಿಧಿಸಿಬೇಕು. ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು. ಹಾಗೆಯೇ ಹಿಂಸಾಚಾರವನ್ನುಕೂಡಲೇ ಕೇಂದ್ರ ಸರ್ಕಾರ ತಹಬದಿಗೆ ತರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ-ಅತ್ಯಾಚಾರ ಖಂಡಿಸಿ ಇಂದು ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಲಾಯಿತು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ, ಸಂವಿಧಾನ ಉಳಿಸಿ - ಹೆಣ್ಣನ್ನು ರಕ್ಷಿಸಿ, ಆಳುವವರು ಅಳಿಸುತ್ತಿದ್ದಾರೆ, ಮಣಿಪುರದ ಜನರಿಗಾಗಿ ನಮ್ಮ ಮೌನ ಕಣ್ಣೀರು ಹೆಸರಿನ ಬಿತ್ತಿ ಫಲಕಗಳನ್ನು ಹಿಡಿದ ನೂರಾರು ಜನರು ಮಣಿಪುರದಲ್ಲಿ ಶಾಂತಿಗಾಗಿ ಒತ್ತಾಯಿಸಿ ಪ್ರತಿಭಟಿಸಿದರು.
ಮಣಿಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಮರುಸ್ಥಾಪಿಸಬೇಕು. ಹಿಂಸಾಚಾರ ನಿಯಂತ್ರಿಸಲು ವಿಫಲರಾದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು. ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂಬ ಒತ್ತಾಯಗಳು ಕೇಳಿಬಂದವು.
ಪ್ರತಿಭಟನೆಯಲ್ಲಿ ಹೋರಾಟಗಾರ್ತಿ ಅಕೈ ಪದ್ಮಶಾಲಿ, ಕೆಆರ್‌ಎಸ್ ಪಕ್ಷದ ನಾಯಕಿ ಜನನಿ ವತ್ಸಲ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.












Click it and Unblock the Notifications