1 ಲಕ್ಷ ಲಂಚಕ್ಕೆ ಬೇಡಿಕೆ: ಚಾಮರಾಜನಗರದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಸಿಬ್ಬಂದಿ
ಚಾಮರಾಜನಗರ, ಜೂನ್, 27: ಇ-ಸ್ವತ್ತು ಮಾಡಿಕೊಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಆರ್‌ಐ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ನಗರಸಭೆಯ ಕಂದಾಯ ನಿರೀಕ್ಷಿಕ ನಾರಾಯಣ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ಇವರು ಮಾದೇಶ್ ಎಂಬುವವರ ನಿವೇಶನದ ಇ-ಸ್ವತ್ತು ಮಾಡಿಕೊಡಲು 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಇಂದು ಮಾದೇಶ್ ಬಳಿ 20 ಸಾವಿರ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ, ಲೋಕಾಯುಕ್ತ ಪೊಲೀಸರು ನಾರಾಯಣ್‌ನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಹಾಗೆಯೇ ಇತ್ತೀಚೆಗಷ್ಟೇ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ನಂಜನಗೂಡು ಪಟ್ಟಣದ ಹಿರಿಯಉಪ ನೋಂದಣಾಧಿಕಾರಿಯ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ಹನೂರಿನ ತೋಟದ ಮನೆಯಲ್ಲಿ ದಾಖಲೆಗಳ ಪರಿಶೀಲನೆಯನ್ನು ಕೂಡ ಮಾಡಿದ್ದರು.
ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಹೊರವಲಯದ ತೋಟದ ಜಮೀನುವೊಂದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು,ನಂಜನಗೂಡು ಹಿರಿಯ ಉಪನೋಂದಣಾಧಿಕಾರಿ ಶಿವಶಂಕರ್ ಮೂರ್ತಿ ಎಂಬುವವರ ತೋಟದ ಮನೆಯಲ್ಲಿ ಕಡತಗಳನ್ನು ಪರಿಶೀಲನೆ ಮಾಡಿದ್ದರು. ಶಿವಶಂಕರ್ ಮೂರ್ತಿ ಅವರಿಗೆ ಸೇರಿರುವ ತೋಟದ ಮನೆ ಇದಾಗಿದ್ದು, ಜಮೀನು ಪತ್ರಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಸಿಕ್ಕಿದೆ ಎನ್ನಲಾಗಿತ್ತು.
ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿತ್ತು. ಬೆಂಗಳೂರು, ತುಮಕೂರು, ಮೈಸೂರು ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಸರ್ಕಾರಿ ಅಧಿಕಾರಿಗಳು ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು.
ಇನ್ನು ತುಮಕೂರಿನ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ನಗರದ ಆರ್.ಟಿ. ನಗರದಲ್ಲಿ ಇರುವ ಮನೆ ಮೇಲೆ ಲೋಕಾಯುಕ್ತ ಡಿಎಸ್‌ಪಿಗಳಾದ ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು.
ಹಾಗೆಯೆ ಹಾವೇರಿ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ ನಡೆಸಿದೆ. ಹಾವೇರಿಯ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ್ ಶೇಟ್ಟರ್ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಅಲ್ಲದೆ ರಾಣೆಬೆನ್ನೂರು ನಗರದ ನಿವಾಸ, ಹಾವೇರಿಯ ದೇವಗರಿಯ ಡಿಸಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಸಿಲಿಕಾನ್ ಟಿಸಿ ಬೆಂಗಳೂರಿನ ಎರಡು ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದರು. ನಗರದ ಬಸವೇಶ್ವರನಗರದಲ್ಲಿ ಇರುವ ಬೆಸ್ಕಾಂ ಟೆಕ್ನಿಕಲ್ ಡೈರೆಕ್ಟರ್ ರಮೇಶ್ ಮನೆ ಮೇಲೆ ದಾಳಿ ಆಗಿತ್ತು. ಇನ್ನು ಇಂಡಸ್ಟ್ರೀಸ್ ಆಂಡ್ ಬಾಯ್ಲರ್ ಇಲಾಖೆ ಅಧಿಕಾರಿಯೊಬ್ಬರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದುಬಂದಿತ್ತು.












Click it and Unblock the Notifications