Krs Dam: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳ ಸಮರ
ಚಾಮರಾಜನಗರ, ಆಗಸ್ಟ್, 31: ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದವು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರಗಳ ವಿರುದ್ಧದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕೋಶ ವ್ಯಕ್ತಪಡಿಸಿದರು.

ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುತ್ತಿದ್ದರೂ ಕರ್ನಾಟಕದ ಸಂಸದರು, ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು ಮೌನವಾಗಿದ್ದಾರೆ. ಆದ್ದರಿಂದ ಇವರೆಲ್ಲರೂ ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಕಿಡಿಕಾರಿದರು. ಇನ್ನು ಕಾವೇರಿ ನಿರ್ವಹಣಾ ಮಂಡಳಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ನೀರು ನಿಲ್ಲಿಸಿ ರಾಜ್ಯದ ಜನರ ಹಿತ ಕಾಪಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯದ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ರೋಹ ಎಸಗುತ್ತಿವೆ. ರಾಜ್ಯ ಸರ್ಕಾರ ತಮಿಳುನಾಡಿನ ಗುಲಾಮಗಿರಿ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಇನ್ನು ರಸ್ತೆ ತಡೆ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಉಗ್ರ ಹೋರಾಟದ ಎಚ್ಚರಿಕೆ ನೀಡಿದ JDS
ಮತ್ತೊಂದೆಡೆ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಜೆಡಿಎಸ್ ನಾಯಕರು, ಎರಡು ದಿನಗಳೊಳಗೆ ನೀರು ನಿಲ್ಲಿಸದಿದ್ದಲ್ಲಿ ಶನಿವಾರ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಂಡ್ಯದಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಗರ ಜೆಡಿಎಸ್ ಕಚೇರಿಯಲ್ಲಿ ನಡೆದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಟಿ. ಶ್ರೀಕಂಠೇಗೌಡ, ಡಾ. ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರು, ಕೂಡಲೇ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ ರಾಜ್ಯದ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಕಾವೇರಿ ನೀರಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಈಗ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಈ ಸರ್ಕಾರದಲ್ಲಿ ರೈತರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಯಾರ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಸರ್ವ ಪಕ್ಷ ಸಭೆಯಲ್ಲಿ ರೈತರ ಹಾಗೂ ರಾಜ್ಯದ ಹಿತಕ್ಕೆ ಬದ್ಧ ಎಂದಿದ್ದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿಯಿಂದಲೇ ನೀರು ಬಿಟ್ಟಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಎಲ್ಲಾ ಸರ್ಕಾರಗಳು ಈ ಹಿಂದೆ ನೀರು ಬಿಟ್ಟಿರುವುದು ಸತ್ಯ. ಆದರೆ, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ನಂತರ ಸರ್ವ ಪಕ್ಷಗಳ ಸಭೆ ನಡೆಸಿ ರಾಜ್ಯದ ಹಿತವನ್ನೂ ಗಮನದಲ್ಲಿಟ್ಟುಕೊಂಡು ನೀರು ಬಿಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಏಕಾಏಕಿ ನೀರು ಬಿಟ್ಟು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಓಲೈಕೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆ ಹೆಸರೇಳಿಕೊಂಡು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಅದನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ದಾಹದಿಂದಾಗಿ ತಮಿಳುನಾಡು ಮುಖ್ಯಮಂತ್ರಿಯ ಓಲೈಕೆಗೆ ಮುಂದಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ರಾಜ್ಯದ ರೈತರು ಹಾಗೂ ಜನರನ್ನು ಬಲಿಕೊಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications