ರಾಜ್ಯದ ಕೊನೇ ರೈಲು ನಿಲ್ದಾಣಕ್ಕೆ ಮೊಟ್ಟ ಮೊದಲ ಬಾರಿ ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲು
ಚಾಮರಾಜನಗರ, ಅಕ್ಟೋಬರ್, 26: ಪ್ರಥಮ ಬಾರಿಗೆ ಮಂಗಳೂರಿನಿಂದ ಚಾಮರಾಜನಗರಕ್ಕೆ ಗೂಡ್ಸ್ ರೈಲು ರಸಗೊಬ್ಬರ ಸಾಗಣೆ ಮಾಡಿದೆ. ಇನ್ನು ಈ ಗೂಡ್ಸ್ ರೈಲನ್ನು ಸ್ವಾಗತಿಸಿದ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಪೂಜೆ ಸಲ್ಲಿಸಿ ಸಂಭ್ರಮಪಟ್ಟರು. ಹಾಗಾದರೆ ಇದು ಎಷ್ಟು ಬೋಗಿಗಳಳನ್ನು ಒಳಗೊಂಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಗರದ ರೈಲ್ವೆ ನಿಲ್ದಾಣಕ್ಕೆ ಮಂಗಳೂರಿನಿಂದ 10 ಬೋಗಿಗಳಲ್ಲಿ ರಸಗೊಬ್ಬರ ತುಂಬಿಕೊಂಡು ಬಂದಿದ್ದ ಗೂಡ್ಸ್ ರೈಲಿಗೆ ರಸಗೊಬ್ಬರ ಮಾರಾಟಗಾರರು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಸಮಿತಿ ಸದಸ್ಯ ವಿ.ಪ್ರಭಕರ್ ಮಾತನಾಡಿ, ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಒಳ್ಳೆಯ ಉದ್ದೇಶದಿಂದ ರೈಲ್ವೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪಡಿತರ ಮಾತ್ರ ಸಾಗಣೆ ಮಾಡುತ್ತೀರಿ. ಆದರೆ, ರಸಗೊಬ್ಬರ ಸಾಗಣೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಲಾಗಿತ್ತು.

ನಾವು ಪ್ರಶ್ನೆ ಮಡಿದ ಪರಿಣಾಮದಿಂದ ಇಂದು (ಅಕ್ಟೋಬರ್ 26) ರಸಗೊಬ್ಬರ ಸಾಗಣೆ ಆಗಿದ್ದು, ಇನ್ಮುಂದೆ ನಿರಂತರವಾಗಿ ರಸಗೊಬ್ಬರ ಸಾಗಣೆ ಮಾಡುತ್ತಾರೆ. ಆದ್ದರಿಂದ ಲಾರಿ ಮಾಲೀಕರು, ಕಾರ್ಮಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯಿಂದ ರೈಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಬಂದರೆ, ಹೆಚ್ಚಿನ ಬೋಗಿಗಳು, ರೈಲು ಕೇಳಬಹುದು. ಜಿಲ್ಲೆಯಿಂದ ರೈಲು ಇಲಾಖೆಗೆ ಆದಾಯ ಕಡಿಮೆ ಇದೆ. ಜಿಲ್ಲೆಗೆ ಹೆಚ್ಚಿನ ಸಾಗಣಿಕೆ ತರಿಸಿದರೆ, ಆದಾಯ ಬರುತ್ತದೆ. ಆಗ ಇತರೆ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಹಾಗೂ ಮೈಸೂರು ಇನ್ನಿತರ ಕಡೆ ಹೊಸ ರೈಲು ಸಂಚಾರ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಏನಾದರೂ ರೈಲ್ವೆ ಸಮಸ್ಯೆ ಇದ್ದರೆ ನನ್ನ ಗಮನ ತನ್ನಿ ಎಂದರು.
ರಸಗೊಬ್ಬರ ಮಾರಾಟಗಾರ ಸಂಘದ ಅಧ್ಯಕ್ಷ ಯೋಗರಾಜ್ ಮಾತನಾಡಿ, ಇಂದು ಮಂಗಳೂರನಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ ಗೂಡ್ಸ್ ರೈಲು ಮೂಲಕ ರಸಗೊಬ್ಬರ ತಂದಿರುವುದು ತುಂಬಾ ಸಂತೋಷವಾಗಿದೆ. ಇದರಿಂದ ರೈತರು ಜಿಲ್ಲೆಯ ರಸಗೊಬ್ಬರ ಮಾರಾಟಗಾರರಿಗೆ ಅನುಕೂಲ ಆದಂತಾಗಿದೆ ಎಂದು ಹೇಳಿದರು.
ಹಿಂದೆ ಮೈಸೂರಿನಿಂದ ಲಾರಿಯಲ್ಲಿ ರಸಗೊಬ್ಬರ ತರಬೇಕಾಗಿತ್ತು. ಅದರಿಂದ ಸಾಗಣಿಕೆ ವೆಚ್ಚ, ಸಮಯ ವ್ಯಯವಾಗುತ್ತಿದ್ದು, ಮಾರಾಟಗಾರರಿಗೆ ಹೊರೆಯಾಗುತ್ತಿತ್ತು. ಅಲ್ಲದೆ, ರಸಗೊಬ್ಬರ ಕೊರತೆ ಎದುರಾಗುತ್ತಿತ್ತು. ಆದರೆ, ಈಗ ರಸಗೊಬ್ಬರ ಕೊರತೆ ಎದುರಾಗುವುದಿಲ್ಲ. ಗೂಡ್ಸ್ ರೈಲ್ವೆಯ ಮುಖಾಂತರ ರಸಗೊಬ್ಬರ ಸಾಗಣೆ ಮಾಡಿದ್ದರಿಂದ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಲಾಗುವುದು ಎಂದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ಚಾಮರಾಜನಗರವು ರಾಜ್ಯದ ಕೊನೆಯ ರೈಲು ನಿಲ್ದಾಣ ಆಗಿದ್ದು ಇದನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications