ಹನೂರು: ವೃದ್ಧನ ಕೈ-ಕಾಲು ಕಟ್ಟಿ ಮನೆಯಲ್ಲಿದ್ದ ಬಂಗಾರ-ಹಣ ಎಗರಿಸಿದ ಖದೀಮರು
ಚಾಮರಾಜನಗರ, ಸೆಪ್ಟೆಂಬರ್, 28: ವೃದ್ಧನ ಕೈ-ಕಾಲು ಕಟ್ಟಿ ಮನೆಯಲ್ಲಿ ಚಿನ್ನ, ಹಣವನ್ನು ಹಾಡಹಗಲೇ ದೋಚಿರುವ ಘಟನೆ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಹಾಗಾದರೆ ಕಳುವಾದ ಚಿನ್ನ ಹಾಗೂ ಹಣ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಗದೀಶ(70) ಎಂಬುವರ ಮನೆಯಲ್ಲಿ ಕಳವಾಗಿದ್ದು, ಇವರ ಪತ್ನಿ ರುಕ್ಮಿಣಿ ಹೊರಗಡೆ ಹೋಗಿದ್ದು. ಆಗ ಅಪರಿಚಿತರು ಬಂದು ಜಗದೀಶ್ ಅವರ ಕೈ, ಕಾಲ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ 168 ಗ್ರಾಂ ಚಿನ್ನ ಹಾಗೂ 41,000 ರೂಪಾಯಿ ಹಣವನ್ನು ಕಳವು ಮಾಡಿದ್ದಾರೆ.

ಸದ್ಯ ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಕಳವು ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ ವಿಧ್ಯಾರ್ಥಿನಿ ಬ್ಯಾಗ್ ಧಗಧಗ: ಶಾಲೆಯಲ್ಲಿ ವಿದ್ಯಾರ್ಥಿನಿ ಬ್ಯಾಗ್ ಹೊತ್ತಿ ಉರಿದ ಕಳವಳಕಾರಿ ಘಟನೆ ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಇಂದು (ಸೆಪ್ಟೆಂಬರ್ 28) ಶನಿವಾರ ಆದ ಹಿನ್ನೆಲೆ ಬೆಳಗ್ಗೆ 11ರ ಸುಮಾರಿಗೆ ವಿದ್ಯಾರ್ಥಿಗಳು ಹೊರಗೆ ಇದ್ದ ವೇಳೆ ಶಾಲಾ ತರಗತಿಯಲ್ಲಿ ಇಟ್ಟಿದ್ದ 7ನೇ ತರಗತಿ ವಿದ್ಯಾರ್ಥಿನಿ ಬ್ಯಾಗ್ ಹೊತ್ತಿ ಉರಿದಿದೆ. ಬಳಿಕ, ಶಿಕ್ಷಕರು ಬೆಂಕಿ ನಂದಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ತೆರಳಿದ್ದಾರೆ. ಆದರೆ ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಹಳ್ಳಕ್ಕೆ ಇಳಿದ ಕೆಆರ್‌ಎಸ್‌ಟಿಸಿ ಬಸ್: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ KSRTC ಬಸ್ ಹಳ್ಳಕ್ಕೆ ಇಳಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಯರಿಯೂರು ಸಮೀಪ ಸೆಪ್ಟೆಂಬರ್ 27ರಂದು ನಡೆದಿದೆ. ಇನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಯರಿಯೂರು ಗ್ರಾಮದ ಕಡೆಯಿಂದ ಬೊಮ್ಮಲಾಪುರ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 47 ಪ್ರಯಾಣಿಕರು ಇದ್ದರು. ಇನ್ನು ಈ ಬಸ್ ಕಂದಕಕ್ಕೆ ಉರುಳಿದ ವೇಳೆ ಕುಂದಕೆರೆ ಗ್ರಾಮದ ರಂಗಯ್ಯ (62) ಮಹಾದೇವಯ್ಯ(55 ) ಸೇರಿ ಮೂವರಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಅವರನ್ನು ಆಂಬುಲೆನ್ಸ್‌ನಲ್ಲಿ ಗುಂಡ್ಲುಪೇಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಚಾಲಕ ಚಂದ್ರಶೇಖರಪ್ಪ ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು, ಆಕಸ್ಮಿಕವಾಗಿ ತನ್ನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದಿದ್ದು, ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಕಂಡಕ್ಟರ್ ಪ್ರಸನ್ನ ಜೊತೆ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಇನ್ನು ಬಸ್ಸನ್ನು ಮೇಲೆತ್ತಲು ಕ್ರೇನ್ ತರಿಸಲಾಗುತ್ತಿದೆ ಎಂದು ಹೇಳಿದರು. ಸದ್ಯ ಈ ಪ್ರಕರಣ ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.












Click it and Unblock the Notifications