ಚಾಮರಾಜನಗರ : ನಕ್ಸಲರತ್ತ ಹದ್ದಿನ ಕಣ್ಣಿಡಲು ಎಸ್ಪಿ ಬಾಲಕೃಷ್ಣ ಸೂಚನೆ

By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಅಕ್ಟೋಬರ್ 22: ತಮಿಳುನಾಡು ಮತ್ತು ಕೇರಳದೊಂದಿಗೆ ಚಾಮರಾಜನಗರ ಸಂಪರ್ಕ ಹೊಂದಿರುವ ಕಾರಣ ನಕ್ಸಲರು ಜಿಲ್ಲೆಯ ಮೂಲಕ ರಾಜ್ಯದೊಳಕ್ಕೆ ನುಸುಳುವ ಸಾಧ್ಯತೆ ಹೆಚ್ಚಾಗಿದೆ. ಈ ಕಾರಣಕ್ಕೆ ಸನ್ನದ್ಧರಾಗಿರುವಂತೆ ನಕ್ಸಲ್ ನಿಗ್ರಹ ಪಡೆಯ ನೂತನ ಎಸ್‍ಪಿ ಕೆ.ಟಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬರಗಿ ಬಳಿ ನಕ್ಸಲ್ ನಿಗ್ರಹ ಪಡೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಲು ಆಗಮಿಸಿದ ವೇಳೆ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು. ಗಡಿ ಪ್ರದೇಶಗಳು ಅರಣ್ಯದಿಂದ ಆವರಿಸಿರುವ ಕಾರಣ ಮತ್ತು ಕೇರಳ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಕಾರಣ ನಕ್ಸಲರು ರಾಜ್ಯದೊಳಕ್ಕೆ ನುಗ್ಗಲು ಹವಣಿಸಬಹುದು. ಹೀಗಾಗಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

Chamarajanagar: SP Balakrishna ordered to keep an eye on Naxals

ಸದಾ ನಕ್ಸಲರ ಚಲನವಲನದ ಬಗ್ಗೆ ಕಣ್ಣಿಡುವಂತೆ ಹಾಗೂ ಸಂಶಯಾತ್ಮಕ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದು ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇನ್ನು ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಅವರು ನಿರ್ಮಾಣದಲ್ಲಿ ನಿಗದಿತ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಂತರ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಗೆ ಬಳಿ ನಿರ್ಮಿಸುತ್ತಿರುವ ಕಟ್ಟಡದ ವೀಕ್ಷಣೆಗೆ ತೆರಳಿದರು. ಈ ವೇಳೆ ಡಿವೈಎಸ್‍ಪಿ ಪ್ರಸನ್ನಕುಮಾರ್, ಸಿಬ್ಬಂದಿ ಮಹದೇವ ಪ್ರಸಾದ್, ಶಿವಕುಮಾರ್ ಇದ್ದರು.

ಚಾಮರಾಜನಗರದಲ್ಲಿ ನಕ್ಸಲ್ ಭಯ

ಚಾಮರಾಜನಗರದಲ್ಲಿ ಕೇರಳದಿಂದ ನಕ್ಸಲರು ನುಗ್ಗುವ ಭಯ ಮೊದಲಿನಿಂದಲೂ ಇದೆ. ಹೀಗಾಗಿಯೇ ಇಲ್ಲಿನ ಅರಣ್ಯದಂಚಿನ ಚೆಕ್‍ಪೋಸ್ಟ್ ಗಳಲ್ಲಿ ಪ್ರಮುಖ ನಕ್ಸಲ್ ನಾಯಕರ ಮಾಹಿತಿಯನ್ನು ಕರಪತ್ರ ಹಂಚಿ ಹಾಗೂ ಪೋಸ್ಟರ್ ಅಂಟಿಸಿ ಸಾರ್ವಜನಿಕರಿಗೆ ನೀಡಲಾಗಿತ್ತು.

Chamarajanagar: SP Balakrishna ordered to keep an eye on Naxals

ದಕ್ಷಿಣಕನ್ನಡ, ಚಿಕ್ಕಮಗಳೂರು ಗಡಿಭಾಗದಲ್ಲಿದ್ದ ಕೆಲವು ನಕ್ಸಲರು ವರ್ಷಗಳ ಹಿಂದೆ ಕೊಡಗಿನ ಮೂಲಕ ಮೈಸೂರು, ಚಾಮರಾಜ ಮಾರ್ಗವಾಗಿ ಕೇರಳದ ಕಡೆಗೆ ತೆರಳಿದ್ದರು ಎಂಬ ವದಂತಿ ಹರಡಿತ್ತು. ಕೊಡಗಿನಲ್ಲಿ ಕೆಲವರನ್ನು ಬೆದರಿಸಿ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಇನ್ನು ಕೇರಳದಲ್ಲಿ ನಕ್ಸಲ್ ಚಟುವಟಿಕೆ ಜಾಸ್ತಿಯಿರುವ ಕಾರಣ ಅಲ್ಲಿನ ಕೆಲವರು ಚಾಮರಾಜನಗರ ಮತ್ತು ಹೆಚ್.ಡಿ.ಕೋಟೆ ಮೂಲಕ ರಾಜ್ಯದೊಳಕ್ಕೆ ನುಗ್ಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಗುಂಡ್ಲುಪೇಟೆಯ ಬರಗಿ ಹಾಗೂ ಹೆಚ್.ಡಿ.ಕೋಟೆಯ ಬೀಚನಹಳ್ಳಿ ಬಳಿ ನಕ್ಸಲ್ ನಿಗ್ರಹ ಪಡೆಯ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Naxals in Tamil Nadu and Kerala are likely to enter the state through the Chamarajanagar district. The new SP KT Balakrishna has instructed the Anti Naxal Force to wake up.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ